ಜಿಲ್ಲೆ

ಜ.13ರಂದು ಮೈಸೂರಿನಲ್ಲಿ ಉದ್ಯೋಗ ಮೇಳ: 20ಕ್ಕೂ ಹೆಚ್ಚು ಪ್ರತಿಷ್ಠಿತ ಸಂಸ್ಥೆಗಳು ಭಾಗಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಸ್ವಾಮಿ ವಿವೇಕಾನಂದ ಅವರ ಜಯಂತ್ಯುತ್ಸವದ ಅಂಗವಾಗಿ ಜ.13ರಂದು ಮೈಸೂರಿನ ಮೇಟಗಹಳ್ಳಿ ಸಿಗ್ನಲ್ ಸಮೀಪ ಪರಿವರ್ತನ ಸ್ಕೂಲ್‌ನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಶ್ರೀರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ಆಶಾಲತಾ ತಿಳಿಸಿದರು.

ಮಂಡ್ಯ, ಮೈಸೂರು ಜಿಲ್ಲೆಯ ಯುವಕ ಹಾಗೂ ಯುವತಿಯರಿಗೆ ಉದ್ಯೋಗ ಕಲ್ಪಿಸಬೇಕೆಂಬ ಉದ್ದೇಶದೊಂದಿಗೆ ರೋಟರಿ ಮಂಡ್ಯ ಹಾಗೂ ಮೈಸೂರು, ಉದ್ಯೋಗಧಾತ ಸಂಸ್ಥೆ, ಓಂ ಶ್ರೀನಿಕೇತನ ಟ್ರಸ್ಟ್ ಸಹಯೋಗದಲ್ಲಿ ಮೇಳ ನಡೆಯಲಿದೆ. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂದು ಬೆಳಗ್ಗೆ 10ಗಂಟೆಯಿಂದ ಸಂಜೆ 4.30ರವರೆಗೆ ಮೇಳವಿರಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಉದ್ಯೋಗಧಾತ ಸಂಸ್ಥೆಯ ಮುಖ್ಯಸ್ಥ ರುಕ್ಮಾಂಗದ ಮಾತನಾಡಿ, 20ಕ್ಕೂ ಹೆಚ್ಚು ಪ್ರತಿಷ್ಠಿತ ಸಂಸ್ಥೆಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ. ಈಗಾಗಲೇ 180 ಉದ್ಯೋಗಾಕಾಂಕ್ಷಿಗಳು ಸ್ವವಿವರನ್ನು ಕಳುಹಿಸಿಕೊಟ್ಟಿದ್ದಾರೆ. ಅಂತೆಯೇ ಅಂದಿನ ಮೇಳದಲ್ಲಿ ನೂರಾರೂ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಡಿಪ್ಲೊಮೊ, ಐಟಿಐ, ಬಿಎ, ಬಿಕಾಂ, ಬಿಎಸ್ಸಿ, ಬಿಬಿಎಂ, ಬಿಬಿಎ, ಬಿಸಿಎ, ಬಿಇ, ಎಂಬಿಎ, ಎಂಸಿಎ, ಎಂಎಸ್ಸಿ, ಎಂಕಾಂ ವ್ಯಾಸಂಗ ಮಾಡಿರುವವರು ಮೇಳದಲ್ಲಿ ಪಾಲ್ಗೊಳ್ಳಬಹುದು ಎಂದು ವಿವರಿಸಿದರು.

ಈಗಾಗಲೇ ನಮ್ಮ ಸಂಸ್ಥೆಯಿಂದ ರಾಜ್ಯದ ಹಲವು ಜಿಲ್ಲೆಯಲ್ಲಿ ಮೇಳ ಆಯೋಜಿಸಿ 10 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಒದಗಿಸಿಕೊಡಲಾಗಿದೆ. ಅವರು ಇನ್ನೊಂದಷ್ಟು ಜನರಿಗೆ ಕೆಲಸ ಕೊಡಿಸಿದ್ದಾರೆ. ನಗರದ ಯುವಸಮೂಹ ತಾಂತ್ರಿಕತೆಯನ್ನು ಬಳಸಿಕೊಂಡು ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಗ್ರಾಮೀಣ ಭಾಗದವರಿಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದೆ ಎಂದು ಹೇಳಿದರು.

ನಿವೃತ್ತ ಸರ್ಕಾರಿ ನೌಕರೆ ಎನ್.ಸರಸ್ವತಿ, ರೋಟರಿ ಮಂಡ್ಯ ಅಧ್ಯಕ್ಷೆ ಬಿ.ಎಸ್.ಅನುಪಮಾ ಇದ್ದರು.