ಜಿಲ್ಲೆ

ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ,  ಹುಬ್ಬಳ್ಳಿಯಲ್ಲಿ ಆರು ತಿಂಗಳಿಗೊಮ್ಮೆ ಆಯೋಜನೆಗೆ ಸಂಕಲ್ಪ

ಹುಬ್ಬಳ್ಳಿ: ಸರ್ಕಾರಗಳು, ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಕೆಜಿಪಿ ಗ್ರೂಪ್ ಮಾಡುತ್ತಿದೆ ಎಂದು ಜಗದ್ಗುರು ಮೂರುಸಾವಿರ ಮಠದ ಶ್ರೀಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಭಾನುವಾರ ಕೆಜಿಪಿ ಫೌಂಡೇಷನ್ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಯಕವೇ ಕೈಲಾಸ ಎಂಬ ಶರಣರ ಮಾತಿನಂತೆ ತಂದೆಯ ಸೇವಾ ಕಾರ್ಯಗಳನ್ನು ಶ್ರೀಗಂಧ ಶೇಟ್ ಮುಂದುವರಿಸಿದ್ದಾರೆ. ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದರು.

ನಿರುದ್ಯೋಗ ಸಮಸ್ಯೆಯನ್ನು ಅರಿತುಕೊಂಡ ಶ್ರೀಗಂಧ ಅವರು ಉದ್ಯೋಗ ಮೇಳ ಆಯೋಜನೆ ಮಾಡಿದ್ದು ಶ್ಲಾಘನೀಯ. ಮೇಲಿಂದ ಮೇಲೆ ಇಂತಹ ಕಾರ್ಯಕ್ರಮಗಳು ನಡೆಯಲಿ, ಉದ್ಯೋಗಕ್ಕಾಗಿ ಅಲೆದಾಡುತ್ತಿರುವ ಯುವ ಸಮುದಾಯ ಕಂಪನಿಗಳಲ್ಲಿ ಸೇರಿಕೊಂಡು ಬದುಕು ಕಟ್ಟಿಕೊಳ್ಳಲಿ ಎಂದು ಹಾರೈಸಿದರು.

ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ ಸಾಧನಾ ಪೋಟೆ ಮಾತನಾಡಿ, ಯುವ ಸಮುದಾಯಕ್ಕೆ ಸಮಸ್ಯೆಯಾಗಿ ಕಾಡುತ್ತಿರುವ ನಿರುದ್ಯೋಗಕ್ಕೆ ಪರಿಹಾರ ಒದಗಿಸಲು ಮೊದಲು ಯುವಕರು ಕೌಶಲಗಳನ್ನು ಬಳಕೆ ಮಾಡಿಕೊಂಡು ಬೆಳೆದರೆ ಏನಾದರೂ ಸಾಧಿಸಬಹುದು. ಯಾವುದೇ ಉದ್ಯೋಗಕ್ಕೆ ಪ್ರಮಾಣ ಪತ್ರಕ್ಕಿಂತ ಯುವಕರಲ್ಲಿರುವ ಕೌಶಲಗಳು ತುಂಬಾ ಮಹತ್ವ ಪಡೆದುಕೊಳ್ಳುತ್ತದೆ. ಕೆಜಿಪಿ ಗ್ರೂಪ್ ಆಯೋಜನೆ ಮಾಡಿರುವ ಮೇಳದ ಲಾಭವನ್ನು ಪಡೆಯಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೆಜಿಪಿ ಗ್ರೂಪ್ ಅಧ್ಯಕ್ಷ ಶ್ರೀಗಂಧ ಶೇಟ್ ಮಾತನಾಡಿ, ಈ ವರೆಗೆ ನಮ್ಮ ಟೀಮ್ ನಿಂದ ಹತ್ತಾರು ಕೆಲಸ ಕಾರ್ಯಗಳನ್ನು ಮಾಡಲಾಗಿದೆ, ಸದ್ಯ ಉದ್ಯೋಗ ಮೇಳವನ್ನು ಆಯೋಜನೆ ಮಾಡಿದ್ದೇವೆ. ಪ್ರತಿ ಆರು ತಿಂಗಳಿಗೊಮ್ಮೆ ಒಂದು ಮೇಳ ಆಯೋಜನೆ ಮಾಡಿ ಯುವ ಸಮುದಾಯಕ್ಕೆ ನೆರವು ನೀಡುವ ಉದ್ದೇಶ ನಮ್ಮದಾಗಿದೆ ಎಂದರು.

ಉದ್ಯೋಗ ಮೇಳಕ್ಕೆ ಕೈ ಜೋಡಿಸಿದ ವಿವಿಧ ಸಂಸ್ಥೆ, ಗಣ್ಯರನ್ನು ಕೆಜಿಪಿ ಗ್ರೂಪ್ ನಿಂದ ಸನ್ಮಾನಿಸಲಾಯಿತು. ಉದ್ಯೋಗ ಮೇಳದಲ್ಲಿ 100ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡು, ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೋಗ ಪತ್ರ ನೀಡಿವೆ.

ಜಿಲ್ಲಾ ಉದ್ಯೋಗ ಅಧಿಕಾರಿ ಬಸವಂತ ಪಿ.ಎನ್, ಎಸ್.ಎಲ್. ಪಾಟೀಲ್, ಶಿಲ್ಪಾ ಸುಣಗಾರ, ಅನೂಪ ಕಮ್ಮಾರ, ಹರೀಶ್ ಅಂಗಡಿ, ಜೀವನ್ ಹಾವನೂರು, ಎನ್.ಕೆ. ಕಲಬುಗಿರ್, ವೆಂಕಟೇಶ್, ಧ್ರುವ ನಾಯಕ, ನಾಗರಾಜ್, ವಿನಾಯಕ ಇತರರು ಉಪಸ್ಥಿತರಿದ್ದರು.