ಹನೂರು: ಶಾಸಕ ಎಂ.ಆರ್.ಮಂಜುನಾಥ್ ನೇತೃತ್ವದಲ್ಲಿ ಹಾಗೂ ಕೋಲಾರ ಪ್ರೊಡ್ಯೂಟ್ ಸಲ್ಯೂಷನ್ ಸಹಯೋಗದಲ್ಲಿ ಜೂ.22ರಂದು ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಗುಡ್ಡಗಾಡು ಪ್ರದೇಶದಿಂದ ಕೂಡಿರುವ ಹನೂರು ಭಾಗದಲ್ಲಿ ಶಿಕ್ಷಿತರ ಸಂಖ್ಯೆ ಹೆಚ್ಚಿದೆ. ಆದರೆ ಉದ್ಯೋಗಾವಕಾಶ ಕಡಿಮೆಯಿದೆ. ಇದರಿಂದ ನಿರುದ್ಯೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಈ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಹನೂರಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ಪಿಯುಸಿ, ಪದವಿ ಹಾಗೂ ಡಿಪ್ಲೊಮಾ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಸ್ವ ವಿವರದ ಮಾಹಿತಿ, ಅಂಕಪಟ್ಟಿ, ಆಧಾರ್‌ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಇತರ ಅಗತ್ಯ ದಾಖಲೆಗಳೊಂದಿಗೆ ಮೇಳದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳುವಂತೆ ಶಾಸಕರು ತಿಳಿಸಿದರು.
ಕ್ಷೇತ್ರದಲ್ಲಿ ಪ್ರಚಾರ: ಉದ್ಯೋಗ ಮೇಳ ಕುರಿತು ಶಾಸಕ ಎಂ.ಆರ್. ಮಂಜುನಾಥ್ ಅವರು ಶುಕ್ರವಾರ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ತೆರಳಿ ಜನರನ್ನು ಭೇಟಿಯಾಗಿ ಕರಪತ್ರವನ್ನು ವಿತರಿಸುವುದರ ಮೂಲಕ ಪ್ರಚಾರ ನಡೆಸಿದರು. ಮಕ್ಕಳಿಗೆ ಇದರ ಪ್ರಯೋಜನ ಪಡೆದುಕೊಳ್ಳಲು ತಿಳಿಸುವಂತೆ ಸಲಹೆ ನೀಡಿದರು.
ಸ್ಥಳೀಯ ಮುಖಂಡರಾದ ವಿಜಯಕುಮಾರ್, ವೆಂಕಟೇಶ್, ರಾಜು, ಪಳನಿಸ್ವಾಮಿ ಇತರರು ಇದ್ದರು.