ಮೈಸೂರು: ಪದವಿ ಗಳಿಸಿದರೂ ಉದ್ಯೋಗ ಇಲ್ಲವೆಂದು ಕೂರದೆ ಕೌಶಲ ವೃದ್ಧಿಸಿಕೊಂಡು ಅರ್ಹ ಉದ್ಯೋಗ ಗಿಟ್ಟಿಸಿಕೊಳ್ಳಲು ಸತತ ಪ್ರಯತ್ನ ಇರಬೇಕು ಎಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಸಲಹೆ ನೀಡಿದರು.
ಒಕ್ಕಲಿಗ ಯುವ ಬ್ರಿಗೇಡ್ ಮತ್ತು ಎನ್‌ಆರ್‌ಐ ಒಕ್ಕಲಿಗರ ಬ್ರಿಗೇಡ್‌ನಿಂದ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಲಕ್ಷ್ಮೀಕಾಂತ ದೇವಸ್ಥಾನ ಆವರಣದಲ್ಲಿರುವ ಬಿಜಿಎಸ್ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಅನ್ನದಾತರ ಮಕ್ಕಳಿಗಾಗಿ ಉದ್ಯೋಗ ಮೇಳ’ದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೈಗಾರಿಕೆ, ವಾಣಿಜ್ಯ ಸಂಸ್ಥೆಗಳು ಹೆಚ್ಚಾಗುತ್ತಿದ್ದು, ಉದ್ಯೋಗಾವಕಾಶಗಳೂ ಹೆಚ್ಚಾಗಿವೆ. ಆದರೆ ತಮಗೆ ಸುಲಭವಾಗಿರುವ ಹೆಚ್ಚು ವೇತನ ನೀಡುವ ಕೆಲಸ ಬೇಕೆಂದು ಕಾಯುವುದರಿಂದ ಅವಕಾಶಗಳು ದೊರೆಯದಂತಾಗಿದೆ. ಹಾಗಾಗಿ, ಪದವಿ ಮಾಡಿದರೂ ಉದ್ಯೋಗ ಇಲ್ಲವೆಂದು ಕೂರುವವರ ಸಂಖ್ಯೆಯೂ ಹೆಚ್ಚಾಗಿದೆ ಎಂದರು.
ಕಾಡುಪ್ರಾಣಿಗಳು ಆಹಾರ ಹುಡುಕಿ ಬೇಟೆಯಾಡುವಂತೆ ಈಗಿನ ಪರಿಸ್ಥಿತಿಯಲ್ಲಿ ಉದ್ಯೋಗ ಬೇಕಾದರೆ ಉದ್ಯೋಗ ಇರುವ ಕಡೆಗೆ ಅರಸಿ ಹೋಗಬೇಕಿದೆ. ಜತೆಗೆ, ಉದ್ಯೋಗಕ್ಕೆ ಬೇಕಾದ ಕೌಶಲವನ್ನು ಬೆಳೆಸಿಕೊಳ್ಳಬೇಕಿದೆ. ಬೇರೆಯವರಲ್ಲಿ ಉದ್ಯೋಗಕ್ಕೆ ಬಯಸದೆ ಸ್ವಯಂ ಉದ್ಯೋಗದಲ್ಲಿಯೂ ತೊಡಗಿಸಿಕೊಂಡು ಇತರರಿಗೂ ಉದ್ಯೋಗ ನೀಡುವಂತಾಗಬೇಕು ಎಂದು ಸಲಹೆ ನೀಡಿದರು.
ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ಮೈಸೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಶ್ರೀ ಸ್ವಾಮಿಮುಕ್ತಿದಾನಂದಾಜಿ ಮಹಾರಾಜ್ ಮಾತನಾಡಿ, ಅನ್ನ, ಅಕ್ಷರ ದಾಸೋಹ ಮಾಡುವ ಜತೆಗೆ ಈಗ ಉದ್ಯೋಗ ಕಲ್ಪಿಸುವ ಕೆಲಸ ಮಾಡುತ್ತಿರುವುದು ಯುವ ಬ್ರಿಗೇಡ್‌ನ ಉತ್ತಮ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.
ಹಿಂದೆ ಉದ್ಯೋಗ ಪುರುಷ ಲಕ್ಷಣ ಎಂದು ಹೇಳುತ್ತಿದ್ದರು. ಆದರೆ ಇಂದಿನ ದಿನದಲ್ಲಿ ಕುಟುಂಬ ನಿರ್ವಹಣೆಗೆ ಮಹಿಳೆಯರೂ ದುಡಿಯಬೇಕಾಗಿದೆ. ಹಾಗಾಗಿ ಉದ್ಯೋಗ ಪುರುಷ, ಮಹಿಳಾ ಲಕ್ಷಣ ಎನ್ನುವ ಕಾಲ ಇದಾಗಿದೆ. ಇದರಿಂದ ಉದ್ಯೋಗಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಮನಗಂಡು ಇಂತಹದ್ದೇ ಉದ್ಯೋಗ ಬೇಕು ಎಂದು ಕೂರದೆ ತಮಗೆ ಸಿಕ್ಕ ಉದ್ಯೋಗವನ್ನು ಬಳಸಿಕೊಂಡು ಮುಂದೆ ಉತ್ತಮ ಉದ್ಯೋಗಕ್ಕೆ ಮೆಟ್ಟಿಲು ಮಾಡಿಕೊಳ್ಳಬೇಕು ಎಂದರು.
ನಿವೃತ್ತ ಐಪಿಎಸ್ ಅಧಿಕಾರಿಯಾದ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ಎಚ್.ಸಿ.ಕಿಶೋರ್‌ಚಂದ್ರ ಮಾತನಾಡಿ, ಉದ್ಯೋಗದಾತರು, ಉದ್ಯೋಗ ಆಕಾಂಕ್ಷಿಗಳನ್ನು ಒಂದೇ ಸೂರಿನಡಿ ಸೇರಿಸುವ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
‘ವಿಜಯವಾಣಿ’ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ ಮಾತನಾಡಿ, ಉದ್ಯೋಗಾವಕಾಶ ಇದ್ದರೂ ಎಲ್ಲಿ ಉದ್ಯೋಗವಿದೆ ಎನ್ನುವ ಮಾಹಿತಿಯೇ ಸಾಕಷ್ಟು ಜನರಲ್ಲಿ ಇರುವುದಿಲ್ಲ. ಇಂತಹವರಿಗಾಗಿ ಉದ್ಯೋಗದಾರರು ಹಾಗೂ ಉದ್ಯೋಗ ಆಕಾಂಕ್ಷಿಗಳನ್ನು ಒಟ್ಟಿಗೆ ಸೇರಿಸಿ ಅವರಿಗೆ ಇಚ್ಛೆಯಾದ ಉದ್ಯೋಗ ಆಯ್ಕೆ ಮಾಡಿಕೊಳ್ಳಲು ಇಲ್ಲಿ ಅವಕಾಶವಿದೆ. ಒಕ್ಕಲುತನ ಮಾಡುವ ಎಲ್ಲ ವರ್ಗದ ಮಕ್ಕಳಿಗೆ ಉದ್ಯೋಗ ದೊರಕಿಸುವ ಪ್ರಯತ್ನ ಮಾಡುವ ಬ್ರಿಗೇಡ್ ಕಾರ್ಯಕ್ಕೆ ಸದಾ ಪ್ರೋತ್ಸಾಹ ನೀಡಬೇಕಿದೆ ಎಂದು ಹೇಳಿದರು.
ಒಕ್ಕಲಿಗ ಯುವ ಬ್ರಿಗೇಡ್ ಮತ್ತು ಎನ್‌ಆರ್‌ಐ ಒಕ್ಕಲಿಗರ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಮಾತನಾಡಿ, 50ಕ್ಕೂ ಅಧಿಕ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಲಿದ್ದು, ಉದ್ಯೋಗ ಆಕಾಂಕ್ಷಿಗಳು ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ. ಹತ್ತನೇ ತರಗತಿಯಿಂದ ಪದವಿ ಪಡೆದ ಯುವಕರೂ ಈ ಉಚಿತ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು, ಎಲ್ಲರಿಗೂ ಉದ್ಯೋಗ ದೊರಕಿಸಿಕೊಡುವ ಉದ್ದೇಶವನ್ನು ಹೊಂದಲಾಗಿದೆ ಎಂದರು.
ಬ್ರಿಗೇಡ್‌ನಿಂದ ಪ್ರತಿವರ್ಷ ಒಂದು ಸಾವಿರ ಜನರಿಗೆ ಉದ್ಯೋಗ, 100ರಿಂದ 150 ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಾಗೂ ಐವರು ಐಎಎಸ್ ಅಭ್ಯರ್ಥಿಗಳಿಗೆ ನೆರವು ನೋಡುತ್ತ ಬರಲಾಗುತ್ತಿದೆ. ಒಕ್ಕಲಿಗ ಸಮಾಜ ಮಾತ್ರವಲ್ಲದೆ, ದೇಶಕ್ಕೆ ಅನ್ನ ನೀಡುವ ಎಲ್ಲ ಜಾತಿ, ಜನಾಂಗದ ರೈತಾಪಿ ವರ್ಗಕ್ಕೆ ನೆರವು ನೀಡುವುದು ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
ಪ್ರತಿವರ್ಷ ಒಂದೊಂದು ಸ್ಥಳದಲ್ಲಿ ಉಚಿತವಾಗಿ ಉದ್ಯೋಗ ಮೇಳ ಆಯೋಜಿಸಿಕೊಂಡು ಬರಲಾಗುತ್ತಿದೆ. ಕಳೆದ ಬಾರಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಮೇಳ ಅಭೂತಪೂರ್ವ ಯಶಸ್ಸು ಕಂಡು 600ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಉದ್ಯೋಗ ಲಭಿಸಿದೆ. ಮೈಸೂರಿನಲ್ಲಿ ಒಂದು ಸಾವಿರ ಜನರಿಗೆ ಉದ್ಯೋಗ ದೊರಕಿಸಿಕೊಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.
ಸಿಬಿಐ ಉಪ ಪೊಲೀಸ್ ಆಯುಕ್ತ ದಿವಾಕರ್ ಇದ್ದರು.
938 ಅಭ್ಯರ್ಥಿಗಳಿಗೆ ಉದ್ಯೋಗವಕಾಶ
ಉದ್ಯೋಗ ಮೇಳದಲ್ಲಿ ಇಂಜಿನಿಯರಿಂಗ್ ಕ್ಷೇತ್ರದ 45, ಔಷಧ ಕ್ಷೇತ್ರದ 10, ಸಾಮಾನ್ಯ ಕ್ಷೇತ್ರದ 15 ಕಂಪನಿಗಳು ಭಾಗವಹಿಸಿದ್ದವು. ಎಸ್‌ಎಸ್‌ಎಲ್‌ಸಿ, ಪಿಯುಸಿ, ವಿವಿಧ ಕೋರ್ಸ್‌ಗಳ ಪದವಿ(ಉತ್ತೀರ್ಣ ಅಥವಾ ಅನುತ್ತೀರ್ಣ), ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್, ಸ್ನಾತಕೋತ್ತರ ಪದವಿ, ಎನ್‌ಟಿಟಿ, ಟಿಸಿಎಚ್, ಬಿ.ಎಡ್, ಎಂ.ಎಡ್ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ 1356 ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು. ಅವರಲ್ಲಿ 452 ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕ ಪತ್ರ ವಿತರಿಸಿದರೆ, 486 ಅಭ್ಯರ್ಥಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು.