ಜಿಲ್ಲೆ

ಹೊಸಕೋಟೆ ವಿದ್ಯಾರ್ಥಿಗಳಿಗೆ ಉದ್ಯೋಗಭಾಗ್ಯ

ಶಿವರಾಜ.ಎಂ

 ವಿಜಯವಾಣಿ ಬೆಂಗಳೂರು ಗ್ರಾಮಾಂತರ

ಹೊಸಕೋಟೆ ಕ್ಷೇತ್ರ ವಿದ್ಯಾರ್ಥಿಗಳಿಗೆ ಅವರ ವಿದ್ಯಾರ್ಹತೆಗೆ ಅನುಸಾರ ಸೂಕ್ತ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಹೊಸಕೋಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು, ನಗರ ಸೇರಿ ತಾಲೂಕಿನ ಎಲ್ಲ ಹೋಬಳಿಗಳ ಸಾವಿರಾರು ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ನೇರ ಸಂದರ್ಶನ ಎದುರಿಸಿದರು.

ತಾಲೂಕಿನ ಪಿಲ್ಲಗುಂಪಾ ಕೈಗಾರಿಕಾ ಪ್ರದೇಶದಲ್ಲಿರುವ 40 ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಪಾಲ್ಗೊಂಡು ತಮ್ಮ ಕಂಪನಿಗಳಿಗೆ ಅವಶ್ಯವಿರುವ ಸೂಕ್ತ ಅಭ್ಯರ್ಥಿಗಳ ಆಯ್ಕೆ ನೇರ ಸಂದರ್ಶನ ನಡೆಸಿದವು. ಕಂಪನಿಯ ಅಧಿಕಾರಿಗಳು ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ ಅವರ ಕೌಶಲ ಹಾಗೂ ವಿದ್ಯಾರ್ಹತೆ ಪರೀಕ್ಷೆ ನಡೆಸಿ ಹಲವರಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ವಿತರಿಸಿದರು. ಸಂದರ್ಶನ ಎದುರಿಸಿದ ಹಲವು ವಿದ್ಯಾರ್ಥಿಳಿಗೆ ಕೆಲವೇ ದಿನಗಳಲ್ಲಿ ಉತ್ತರಿಸುವುದಾಗಿ ಕಂಪನಿ ಅಧಿಕಾರಿಗಳು ತಿಳಿಸಿದರು. ಸುಮಾರು ಎರಡು ಗಂಟೆಗಳ ನೇರ ಸಂದರ್ಶನ ಪರಿಶೀಲಿಸಿದ ಶಾಸಕ ಶರತ್ ಬಚ್ಚೇಗೌಡ ಆಯ್ಕೆಯಾದ 150ಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದರು.

ವಿದ್ಯಾರ್ಥಿಗಳಲ್ಲಿ ಹರ್ಷ: ಹೊಸಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೂಲಿಬೆಲೆ ಸರ್ಕಾರಿ ಕಾಲೇಜು ಹಾಗೂ ಐಟಿಐನಲ್ಲಿ ಪದವಿ ಹಾಗೂ ತಾಂತ್ರಿಕ ಪದವಿ ಪಡೆದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದರು. ಸ್ಥಳದಲ್ಲೇ ನೇಮಕಾತಿ ಪತ್ರ ಪಡೆದ ವಿದ್ಯಾರ್ಥಿಗಳು ಉದ್ಯೋಗ ಮೇಳದ ಕುರಿತು ಸಂತಸ ವ್ಯಕ್ತಪಡಿಸಿದರು. ಹೊಸಕೋಟೆ ಭಾಗದಲ್ಲಿ ಕೈಗಾರಿಕಾ ವಲಯ ವಿಸ್ತರಣೆಯಾಗುತ್ತಿದ್ದು ಭವಿಷ್ಯದಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಸಿಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚು ಉದ್ಯೋಗ ಸಿಗಬೇಕು

ಸರ್ಕಾರಿ ಕಾಲೇಜುಗಳಲ್ಲಿ ಪದವಿ ಪಡೆಯುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಉನ್ನತ ಹುದ್ದೆ ದೊರೆತರೆ ನಾವು ಅವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಉದ್ಯೋಗ ಮೇಳದಲ್ಲಿ ಮಾತನಾಡಿದ ಅವರು, ತಾಲೂಕಿನ ಪಿಲ್ಲಗುಂಪಾ ಕೈಗಾರಿಕಾ ಪ್ರದೇಶದಲ್ಲಿರುವ 40 ಕ್ಕೂ ಹೆಚ್ಚು ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಉದ್ಯೋಗ ನೀಡಲು ಮುಂದೆ ಬಂದಿದ್ದು, ಹೊಸಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೂಲಿಬೆಲೆ ಸರ್ಕಾರಿ ಕಾಲೇಜು ಹಾಗೂ ಐಟಿಐನಲ್ಲಿ ಪದವಿ ಹಾಗೂ ತಾಂತ್ರಿಕ ಪದವಿ ಪಡೆದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ನೀಡಲು ಮುಂದಾಗಿದ್ದು, ವಿದ್ಯಾರ್ಥಿಗಳು ಇದರ ಸೌಲಭ್ಯ ಪಡೆಯಬೇಕು. ನೇರ ಸಂದರ್ಶನವಿದ್ದು ಗಾಬರಿ ಇಲ್ಲದೆ ನೇರವಾಗಿ ಉತ್ತರ ನೀಡಬೇಕು. ನೇರ ಸಂದರ್ಶನಕ್ಕೆ ಮೂರು ತಿಂಗಳುಗಳಿಂದ ವಿದ್ಯಾರ್ಥಿಗಳಿಗೆ ಅಗತ್ಯ ಕೌಶಲ ತರಬೇತಿ ನೀಡಲಾಗಿದ್ದು, ಕಾರ್ಯಾಗಾರದ ಪ್ರಯೋಜನ ಪಡೆಯಬೇಕು ಎಂದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೂತನ ಕೋರ್ಸ್‌ಗಳನ್ನು ಅನಾವರಣಗೊಳಿಸಲು ತಯಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗದ ಕೊರತೆ ನೀಗಿಸುವ ಗುರಿ ಹೊಂದಲಾಗಿದೆ ಎಂದರು. ಉನ್ನತ ಶಿಕ್ಷಣ ಹಾಗೂ ಕೈಗಾರಿಕೆಗಳ ಮಧ್ಯೆ ಬಹುದೊಡ್ಡ ಕಂದಕ ಉಂಟಾಗಿದೆ. ಇದನ್ನು ಹೋಗಲಾಡಿಸಲು ಕಾಲೇಜು ಆಡಳಿತ ಮಂಡಳಿ ಹಾಗೂ ಕೈಗಾರಿಕೆ ಆಡಳಿತ ಮಂಡಳಿ ನಡುವೆ ಹೊಸ ಸಂಬಂಧ ಏರ್ಪಡುವಂತೆ ಕೈಗಾರಿಗೆಗಳಿಗೆ ಬೇಕಾದ ಕೌಶಲಕ್ಕೆ ಸೂಕ್ತ ತರಬೇತಿಯನ್ನು ಕಾಲೇಜು ಹಂತದಲ್ಲಿ ನೀಡಲು ಮುಂದಾಗುತ್ತೇವೆ ಎಂದರು.