ದೇವನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳು 
ಜಿಲ್ಲೆ

ತವರಿಗೆ ಮರಳಿದ ಸ್ಥಳೀಯರು!

ಶಿವರಾಜ.ಎಂ

ವಲಸೆ ತಪ್ಪಿಸಿದ ಉದ್ಯೋಗ ಮೇಳ

ನೌಕರಿ ಭಾಗ್ಯದಿಂದ ಜಿಲ್ಲೆಯ ಜನ ಖುಷ್


ವಿಜಯವಾಣಿ ವಿಶೇಷ ಬೆಂಗಳೂರು ಗ್ರಾಮಾಂತರ
ಬಹು ನಿರೀಕ್ಷಿತ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಸಾವಿರಾರು ಸ್ಥಳೀಯರಿಗೆ ಉದ್ಯೋಗ ಭದ್ರತೆ ಒದಗಿಸಿದೆ. ಮುಖ್ಯವಾಗಿ ರಾಜಧಾನಿ ಬೆಂಗಳೂರು ಸೇರಿ ವಿವಿಧ ಕಡೆಗಳಿಗೆ ಉದ್ಯೋಗ ನಿಮಿತ್ತ ಪ್ರತಿದಿನ ಜಿಲ್ಲೆಯಿಂದ ಹೋಗಿ ಬರುತ್ತಿದ್ದ ಸಾವಿರಾರು ಮಂದಿಯ ಪ್ರಯಾಸ ತಪ್ಪಿಸಿದೆ. ಇದರ ಜತೆಗೆ ಸ್ವಗ್ರಾಮ ಬಿಟ್ಟು ವರ್ಷಗಟ್ಟಲೆ ಇತರ ಕಡೆಗಳಲ್ಲಿ ವಾಸ್ತವ್ಯ ಹೂಡಿದ್ದ ಜಿಲ್ಲೆಯ ಜನ ವಾಪಸ್ ತವರಿಗೆ ಮರಳುವ ಅವಕಾಶ ಸಿಕ್ಕಂತಾಗಿದೆ.
ಜಿಲ್ಲೆಯ ನಾಲ್ಕೂ ತಾಲೂಕಿನಿಂದ ಪ್ರತಿದಿನ ಉದ್ಯೋಗ ಅರಸಿ ಬೆಂಗಳೂರು ಸೇರಿ ಹಲವು ಕಡೆಗಳಿಗೆ ಪ್ರಯಾಸದ ಪ್ರಯಾಣ ಮಾಡುತ್ತಿದ್ದ ಅನೇಕರಿಗೆ ದೇವನಹಳ್ಳಿಯಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದಿಂದ ಆಸರೆ ಸಿಕ್ಕಂತಾಗಿದೆ. ಪ್ರತಿದಿನದ ಪ್ರಯಾಸಕ್ಕೆ ಬ್ರೇಕ್ ಬಿದ್ದಂತಾಗಿದೆ. ನೆಲಮಂಗಲ ಭಾಗದವರಿಗೆ ದಾಬಸ್‌ಪೇಟೆ, ಹೊಸಕೋಟೆ ಭಾಗದವರಿಗೆ ಹೊರವಲಯದಲ್ಲಿನ ಕೈಗಾರಿಕಾ ವಲಯ, ದೊಡ್ಡಬಳ್ಳಾಪುರದವರಿಗೆ ಬಾಶೆಟ್ಟಿ ವ್ಯಾಪ್ತಿಯಲ್ಲಿ ನೌಕರಿ ದಕ್ಕಿರುವುದರಿಂದ ಸ್ಥಳೀಯರು ನಿಟ್ಟುಸಿರುವ ಬಿಡುವಂತಾಗಿದೆ. ಹಲವು ವರ್ಷದಿಂದ ಕಿ.ಮೀಗಟ್ಟಲೆ ಪ್ರಯಾಣಕ್ಕೆ ತಡೆ ಬಿದ್ದಿದೆ. ಮುಖ್ಯವಾಗಿ ಸಮಯ ಹಾಗೂ ಶ್ರಮ ಉಳಿತಾಯವಾಗಿದ್ದು ಉದ್ಯೋಗ ಮೇಳದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.
ಗ್ರಾಮಕ್ಕೆ ವಾಪಸ್: ಗ್ರಾಮೀಣ ಪ್ರದೇಶಗಳಿಂದ ನೂರಾರು ಸಂಖ್ಯೆಯಲ್ಲಿ ಗ್ರಾಮಗಳನ್ನು ತೊರೆದು ಪಟ್ಟಣ ಪ್ರದೇಶಗಳಲ್ಲಿ ವಾಸ್ತವ್ಯ ಹೂಡುವಂತಾಗಿತ್ತು.ಬಾಡಿಗೆ ಮನೆಗಳು, ಪಿಜಿಗಳಲ್ಲಿ ವಾಸ್ತವ್ಯ ಮಾಡುತ್ತಾ ದುಬಾರಿ ಜೀವನವೆಚ್ಚದಿಂದ ಉಳಿತಾಯಕ್ಕೆ ಪರದಾಡುತ್ತಿದ್ದವರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರೆತಿರುವುದು ಭಾರಿ ಸಂತಸ ತಂದಿದೆ. ಇದರಿಂದ ಮರಳಿ ಸ್ವಗ್ರಾಮಗಳಿಗೆ ಮರಳಲು ತಯಾರು ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಸ್ಥಳದಲ್ಲಿಯೇ 1097 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ಸಿಕ್ಕಿದ್ದು, ಉದ್ಯೋಗ ಮಾಡಲು ಕಾತುರರಾಗಿದ್ದಾರೆ. ಇದರ ಜತೆಗೆ 3500 ಅಭ್ಯರ್ಥಿಗಳನ್ನು ಮುಂದಿನ ಸಂದರ್ಶನಕ್ಕಾಗಿ ಆಯ್ಕೆ ಮಾಡಿರುವುದರಿಂದ ಅವರೂ ದೂರದ ಊರುಗಳಿಗೆ ಪ್ರಯಾಣ ಬೆಳೆಸಬೇಕಾದ ಅನಿವಾರ್ಯತೆಯಿಂದ ತಪ್ಪಿಸಿಕೊಂಡಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮಹಿಳೆಯರದೂ ಸಿಂಹಪಾಲು:ಉದ್ಯೋಗ ಮೇಳದಲ್ಲಿ ಆಯ್ಕೆಯಾದವರ ಪೈಕಿ ಮಹಿಳೆಯರ ಸಂಖ್ಯೆಯೂ ದೊಡ್ಡದಿದೆ ಎನ್ನಲಾಗಿದೆ. ಪ್ರತಿದಿನ ದೂರ ಪ್ರಯಾಣ ಮಾಡಿ ಮನೆಗೆ ಮರಳುವಷ್ಟರಲ್ಲೇ ಇಡೀ ದಿನ ಕಳೆದುಹೋಗುತ್ತಿತ್ತು. ಇದೀಗ ಜಿಲ್ಲಾ ವ್ಯಾಪ್ತಿಯಲ್ಲೇ ನೌಕರಿ ಸಿಕ್ಕಿದ್ದರಿಂದ ಬಹಳ ಅನುಕೂಲವಾಗಿದೆ,. ಮತ್ತೊಂದು ಕಡೆ ಕೆಲಸ ಸಿಕ್ಕಿದ್ದರೂ ದೂರ ಪ್ರಯಾಣ ಮಾಡಲು ಸಾಧ್ಯವಾಗದೆ ಅನೇಕರು ನಿರುದ್ಯೋಗಿಗಳಾಗಿ ಮನೆಯಲ್ಲಿಯೇ ಉಳಿಯುವಂತಾಗಿತ್ತು. ಅವರಿಗೆಲ್ಲ ಈ ಉದ್ಯೋಗ ಮೇಳ ವರದಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ, ಪಿಯುಸಿ ಹೆಚ್ಚು: ಉದ್ಯೋಗ ಮೇಳದಲ್ಲಿ ನೋಂದಾಯಿಸಿಕೊಂಡಿದ್ದವರಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಹತೆಯ ಯುವಕ ಯುವತಿಯೇ ಹೆಚ್ಚಿದ್ದರು. ಇವರಿಗೆ ಸರಿಯಾದ ನೌಕರಿ ಸಿಗದೆ ಪರದಾಡುತ್ತಿದ್ದರು. ಪ್ರಸ್ತುತ ಇವರಿಗೆ ಸ್ಥಳೀಯವಾಗಿಯೇ ನೌಕರಿ ಸಿಕ್ಕಿರುವುದರಿಂದ ನಿರುದ್ಯೋಗ ಪರ್ವದಿಂದ ಹೊರಬಂದಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ತಾಲೂಕುವಾರು ಮೇಳ: ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳದ ಯಶಸ್ಸಿನಿಂದ ಪ್ರೇರಿತವಾಗಿರುವ ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಮೇಳ ಆಯೋಜಿಸಲು ಉತ್ಸುಕತೆ ತೋರಿದೆ. ಇದಕ್ಕೆ ಸ್ಥಳೀಯ ಶಾಸಕರಿಂದಲೂ ಪ್ರೋತ್ಸಾಹ ವ್ಯಕ್ತವಾಗಿದ್ದು, ಸ್ಥಳೀಯ ಕಂಪನಿಗಳೂ ಆಸಕ್ತಿ ತೋರಿಸಿವೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಬೃಹತ್ ಕೈಗಾರಿಕಾ ವಲಯ ನಿರ್ಮಾಣವಾಗುತ್ತಿದ್ದು ಭವಿಷ್ಯದಲ್ಲಿ ಜಿಲ್ಲೆಯ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ಭಾಗ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉತ್ಸುಕರಾಗಿದ್ದಾರೆ.

ಈ ಉದ್ಯೋಗ ಮೇಳದಿಂದ ಜಿಲ್ಲೆಯ ಜನರಿಗೆ ಸ್ಥಳೀಯವಾಗಿಯೇ ನೌಕರಿ ಸಿಕ್ಕಂತಾಗಿದೆ, ಪ್ರತಿದಿನ ದೂರದೂರಿಗಳಿಗೆ ಪ್ರಯಾಣ ಮಾಡುತ್ತಿದ್ದ ಅನೇಕರಿಗೆ ಈ ತೊಂದರೆ ತಪ್ಪಿದೆ. ಉದ್ಯೋಗಕ್ಕಾಗಿ ಸ್ವಗ್ರಾಮ ತೊರೆದು ಪಟ್ಟಣ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿದ್ದವರು ಮರಳಿ ಸ್ವಗ್ರಾಮಕ್ಕೆ ಬರುವಂತಾಗಿದೆ. ಮುಂದಿನ ದಿನಗಳಲ್ಲಿ ತಾಲೂಕುವಾರು ಮೇಳ ಆಯೋಜಿಸಿ ಸ್ಥಳೀಯವಾಗಿಯೇ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಶ್ರಮಿಸಲಾಗುವುದು.

ಡಾ.ಎನ್.ಶಿವಶಂಕರ್, ಜಿಲ್ಲಾಧಿಕಾರಿ

ಇದೊಂದು ವಿನೂತನ ಪ್ರಯೋಗ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ, ಸ್ಥಳೀಯರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರಕಿಸಿಕೊಡುವ ಆಶಯಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಂಪನಿಗಳನ್ನು ಕರೆತರುವ ಪ್ರಯತ್ನ ಮಾಡಲಾಗುವುದು, ಸ್ಥಳೀಯರಿಗೆ ಉದ್ಯೋಗ ಭದ್ರತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಿದೆ, ಇದರಿಂದ ಉತ್ತೇಜಿತರಾಗಿರುವ ಹಲವು ಕಂಪನಿಗಳು ಮುಂದಿನ ದಿನಗಳಲ್ಲಿ ತಾವೂ ಭಾಗವಹಿಸುವ ಇಂಗಿತ ವ್ಯಕ್ತಪಡಿಸಿವೆ.

ಡಾ.ಕೆ.ಎನ್.ಅನುರಾಧಾ, ಜಿಪಂ ಸಿಇಒ