ಜಿಲ್ಲೆ

ಮಕ್ಕಳಿಗೆ ಉದ್ಯೋಗ ಸೃಷ್ಟಿ ತರಬೇತಿ ಅಗತ್ಯ: ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಮಹಾರಾಜ್

ಮೈಸೂರು: ಶಾಲಾ-ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಉದ್ಯೋಗ ಸೃಷ್ಟಿಯ ತರಬೇತಿ ನೀಡುವುದು ಅಗತ್ಯ ಎಂದು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಮಹಾರಾಜ್ ಅಭಿಪ್ರಾಯಪಟ್ಟರು.

ಸ್ವದೇಶಿ ಜಾಗರಣ ಮಂಚ್‌ನಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರದಿಂದ ಜ.26ರವರೆಗೆ ಆಯೋಜಿಸಿರುವ ಸ್ವದೇಶಿ ಮೇಳ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವಿದೇಶಗಳಲ್ಲಿ ಕಲಿಕೆ ಸಮಯದಲ್ಲಿಯೇ ಯಾವುದಾದರೂ ಒಂದು ವೃತ್ತಿಯನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡಲಾಗುತ್ತದೆ. ಅದೇ ಮಾದರಿಯಲ್ಲಿ ನಮ್ಮ ದೇಶದಲ್ಲಿಯೂ ತಮಗೆ ಇಚ್ಛೆಯಾದ ಕೌಶಲ ಕಲಿಯಲು ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.

ಸಾವಿರಾರು ವರ್ಷಗಳ ಹಿಂದೆಯೇ ನಾಗರಿಕತೆಯನ್ನು ಮೈಗೂಡಿಸಿಕೊಂಡಿದ್ದ ಭಾರತದಲ್ಲಿನ ಸ್ವದೇಶಿ ಉತ್ಪನ್ನಗಳಿಗೆ ವಿದೇಶಿಗರು ಮಾರು ಹೋಗಿದ್ದರು. ಹೀಗಾಗಿ ವ್ಯಾಪಾರ-ವಹಿವಾಟಿಗಾಗಿ ಬಂದು ವಸ್ತುಗಳನ್ನು ಕೊಳ್ಳುತ್ತಿದ್ದರು. ಆದರೆ ಇಂದು ಸ್ವದೇಶಿ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಸಮಸ್ಯೆಯಿಂದ ವಿದೇಶಗಳಿಂದ ವಸ್ತುಗಳನ್ನು ಭಾರತ ಅವಲಂಬಿಸಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಉತ್ಪಾದನೆಯಾಗುವ ವಸ್ತುಗಳಿಗೆ ಮಾರುಕಟ್ಟೆ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೆ ಮಧ್ಯವರ್ತಿಗಳ ಹಾವಳಿಯಿಂದ ಉತ್ಪಾದಕರು ಹಾಗೂ ಗ್ರಾಹಕರಿಗೂ ಲಾಭವಾಗುತ್ತಿಲ್ಲ. ಆದ್ದರಿಂದ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು. ವಿದೇಶದಲ್ಲಿ ಮಾರುಕಟ್ಟೆ ಕುರಿತು ಅಧ್ಯಯನ ಮಾಡಿ ಅದನ್ನು ನಮ್ಮ ಸ್ವದೇಶಿ ವಸ್ತುಗಳ ಬೆಳವಣಿಗೆಗೆ ಸರ್ಕಾರ ಕಾರ್ಯಕ್ರಮ ರೂಪಿಸಬೇಕು ಎಂದು ತಿಳಿಸಿದರು.

ಸ್ವದೇಶಿ ಜಾಗರಣ ಮಂಚ್‌ನ ಅಖಿಲ ಭಾರತ ಮುಖ್ಯ ಸಂಘಟಕ ಸುರೇಶ್‌ಕುಮಾರ್ ಮಾತನಾಡಿ, ಸರ್ಕಾರಿ ಉದ್ಯೋಗಳು ಶೇ.10ರಷ್ಟು ಮಾತ್ರ ಇರುವುದರಿಂದ ಸ್ವ ಉದ್ಯೋಗದತ್ತ ಗಮನ ಹರಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಕೃಷಿಯಲ್ಲಿ ಶೇ.25ರಿಂದ 37ರಷ್ಟು ಉದ್ಯೋಗ ಸೃಷ್ಟಿಯಾದರೆ ಉಳಿದ ಉದ್ಯೋಗ ಸಣ್ಣ, ಅತಿ ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆಗಳಿಂದ ಸೃಷ್ಟಿಯಾಗುತ್ತಿವೆ. ಇಂತಹ ಉದ್ಯಮಗಳನ್ನು ಪ್ರೋತ್ಸಾಹಿಸಲು ಜನರನ್ನು ಜಾಗೃತಗೊಳಿಸುವ ಕೆಲಸವನ್ನು ಸ್ವದೇಶಿ ಜಾಗರಣ ಮಂಚ್ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

ಚೀನಾದವರು ಭಾರತಕ್ಕೆ ಗಡಿಯಲ್ಲಿ ಒಂದು ರೀತಿ ತೊಂದರೆ ಕೊಡುತ್ತಿದ್ದರೆ, ಮಾರುಕಟ್ಟೆಯಲ್ಲಿ ವಸ್ತುಗಳನ್ನು ಮಾರುವ ಮೂಲಕ ಮತ್ತೊಂದು ರೀತಿ ತೊಂದರೆ ಕೊಡುತ್ತಿದ್ದಾರೆೆ. ಹಾಗಾಗಿ ನಮ್ಮ ಸ್ವದೇಶಿತನ ಉಳಿಸಲು ಚೀನಾ ವಸ್ತುಗಳನ್ನು ತಿರಸ್ಕರಿಸಬೇಕು. ನಮ್ಮ ದೇಶದಲ್ಲಿ ತಯಾರಾದ ವಸ್ತುಗಳನ್ನು ಬಳಸಬೇಕು ಎಂದು ಕೋರಿದರು.

ಉದ್ಯಮಿಗಳಾಗಬೇಕು, ಸ್ವಯಂ ಉದ್ಯೋಗ ಕಂಡುಕೊಳ್ಳಬೇಕೆಂಬುದು ಈ ನೆಲದಲ್ಲಿಯೇ ಇದೆ. ಆದರೆ ಬ್ರಿಟಿಷರು ಪರಿಚಯಿಸಿದ ಶಿಕ್ಷಣ ನಮ್ಮನ್ನು ಮತ್ತೊಬ್ಬರ ಬಳಿ ಉದ್ಯೋಗ ಕೇಳುವಂತೆ ಮಾಡಿದೆ. ದೇಶದ ಅಂಬಾನಿ, ಅದಾನಿ, ಬಾಬಾ ರಾಮದೇವ ಬಹಳ ಓದಿಕೊಂಡವರಲ್ಲ. ಆದರೆ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಅದೇ ಮಾದರಿಯಲ್ಲಿ ದೇಶದಲ್ಲಿ ಇನ್ನಷ್ಟು ಜನರು ಮುಂದೆ ಬರಬೇಕು. ದೇಶ ಆರ್ಥಿಕತೆಯಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲಬೇಕು ಎಂದರು.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಸ್ವದೇಶಿ ಕಲ್ಪನೆಯನ್ನು ಗಾಂಧೀಜಿ ನಮಗೆ ತೋರಿಸಿಕೊಟ್ಟರು. ಮೈಸೂರಿನಲ್ಲಿ ಬಹಳಷ್ಟು ಹಿಂದೆಯೇ ಕೆ.ಆರ್.ಮಿಲ್, ಜಾವಾ, ಅಗರಬತ್ತಿ ಸೇರಿದಂತೆ ಇನ್ನಿತರ ಸ್ವದೇಶಿ ವಸ್ತುಗಳನ್ನು ತಯಾರಿಸಲಾಗುತ್ತಿತ್ತು. ಈಗ ಅಂತಹ ದಿನಗಳು ಮತ್ತೆ ಮರಳಿ ಬರಬೇಕಿದೆ. ಅದಕ್ಕಾಗಿ ಜನರಲ್ಲಿ ಸ್ವದೇಶಿ ವಸ್ತುಗಳ ಕುರಿತು ಜಾಗೃತಿ ಮೂಡಿಸಲು ಇಂತಹ ಪ್ರದರ್ಶನ ಅಗತ್ಯ ಎಂದು ಹೇಳಿದರು.

ರೋಜ್‌ಗಾರ್ ಯೋಜನೆಯಡಿ ಮೈಸೂರು ಜಿಲ್ಲೆ ಒಂದಕ್ಕೆ ಇದೂವರೆಗೆ ಒಟ್ಟು 9 ಸಾವಿರ ಕೋಟಿ ರೂ. ನೀಡುವ ಮೂಲಕ ನಿರುದ್ಯೋಗಿಗಳಿಗೆ ಕೇಂದ್ರ ಸರ್ಕಾರ ನೆರವು ನೀಡುವ ಮೂಲಕ ಉದ್ಯೋಗ ಸೃಷ್ಟಿಸಿದೆ. ಇದರಿಂದ ಜಿಲ್ಲೆಯ ಆರ್ಥಿಕ ಮಟ್ಟವೂ ಸುಧಾರಿಸಲಿದೆ ಎಂದರು.

ಶಿಲ್ಪಿ ಅರುಣ್ ಯೋಗಿರಾಜ್ ಮಾತನಾಡಿ, ಸ್ವದೇಶಿ ವಸ್ತುಗಳ ಉತ್ತೇಜನಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು. ನಮ್ಮ ಕಲೆ, ಸಂಸ್ಕೃತಿ, ಪರಂಪರೆಯನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ವಿಶ್ವಪ್ರಸಾದ್ ಆಳ್ವಾ, ಶಿವಕುಮಾರ್, ಗೋಪಾಲಕೃಷ್ಣ, ತಿಲಕ್, ರಾಮ್‌ಜಿ ಇತರರಿಗೆ ದತ್ತೋಪಂತ್ ಠೇಂಗಡಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸ್ವಾವಲಂಬಿ ಭಾರತ್ ಅಭಿಯಾನದ ಕ್ಷೇತ್ರೀಯ ಸಮನ್ವಯಕಾರ ಎನ್.ಆರ್.ಮಂಜುನಾಥ್, ಸಂಯೋಜಕ ಡಾ.ಲಕ್ಷ್ಮೀನರಸಿಂಹ, ರಶ್ಮಿ, ಸುಚೀಂದ್ರ ಇತರರು ಇದ್ದರು.