ದಾವಣಗೆರೆ: ಬೌದ್ಧಿಕ ಆಸ್ತಿ ಹಕ್ಕಿನಿಂದ ಆರ್ಥಿಕ ಪ್ರಗತಿ, ಹೊಸ ಕೈಗಾರಿಕೆ ಹಾಗೂ ತಯಾರಕ ಸಂಸ್ಥೆಗಳ ಸ್ಥಾಪನೆ ಉದ್ಯೋಗ ಸೃಷ್ಟಿಗೆ ಕಾರಣವಾಗುವ ಮೂಲಕ ಜನರ ಜೀವನಮಟ್ಟ ಉತ್ತಮಪಡಿಸಲು ಸಹಕಾರವಾಗಲಿದೆ ಎಂದು ಸ್ಮಾರ್ಟ್‌ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರೇಶ್‌ಕುಮಾರ್ ಹೇಳಿದರು
ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಬೌದ್ಧಿಕ ಆಸ್ತಿ ಹಕ್ಕುಗಳ ಘಟಕದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೌದ್ಧಿಕ ಆಸ್ತಿ ಹಕ್ಕುಗಳು ವಿಷಯ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ಬೌದ್ದಿಕ ಸಾಮರ್ಥ್ಯದಿಂದ ಸೃಷ್ಟಿಸಲ್ಪಟ್ಟ ಸೃಜನಾತ್ಮಕ ಮತ್ತು ಕ್ರಿಯಾತ್ಮಕ ಕ್ರಿಯೆಗಳನ್ನು ಬೌದ್ದಿಕ ಸ್ವತ್ತುಗಳು ಅಥವಾ ಆಸ್ತಿಯ ಹಕ್ಕುಗಳಾಗಿ ರಕ್ಷಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸ್ಮಾರ್ಟ್‌ಸಿಟಿಯಲ್ಲಿ ದಾವಣಗೆರೆ ದೇಶದಲ್ಲಿ 23ನೇ ಸ್ಥಾನದಲ್ಲಿದ್ದು ಹಾಗೂ ಕರ್ನಾಟಕದಲ್ಲಿ 3ನೇ ಸ್ಥಾನದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಕಾಲೇಜಿನ ಯಾಂತ್ರಿಕ ವಿಭಾಗದ ಪ್ರಾಧ್ಯಾಪಕ ಡಾ.ಶೇಖರಪ್ಪ ಬಿ. ಮಲ್ಲೂರ ಮಾತನಾಡಿ, ಬೌದ್ದಿಕ ಆಸ್ತಿಯ ಹಕ್ಕು ಇತರ ಆಸ್ತಿಗಳಂತೆ ಅದನ್ನು ಹೊಂದಿದ ಆಥವಾ ಸೃಷ್ಟಿಸಿದ ಲೇಖಕರು, ಸಂಶೋಧಕರು ಹಾಗೂ ಉತ್ಪಾದಕ ಸಂಸ್ಥೆಗಳಿಗೆ ಕಾನೂನಾತ್ಮಕವಾಗಿ ನೀಡುವುದಲ್ಲದೇ ಆರ್ಥಿಕ ಅನುಕೂಲ ಒದಗಿಸುತ್ತಿದೆ ಎಂದು ಹೇಳಿದರು.
ಪ್ರಭಾರ ಪ್ರಾಚಾರ್ಯ ಡಾ.ಕೆ.ಮಂಜುನಾಥ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೇಟೆಂಟ್ ಎನ್ನುವುದು ಹೊಸ ಸಂಶೋಧನೆ ಅಥವಾ ಅವಿಷ್ಕಾರಕ್ಕಾಗಿ ನೀಡಲಾದ ವಿಶೇಷ ಹಕ್ಕು. ಇದು ಸೀಮಿತ ಅವಧಿಗೆ ಒಳಪಟ್ಟಿರುತ್ತದೆ ಎಂದು ವಿವರಿಸಿದರು.
ಸ್ಮಾರ್ಟ್‌ಸಿಟಿ ಯೋಜನಾ ಸಲಹೆಗಾರ ಹಾಗೂ ಮುಖ್ಯಸ್ಥ ಹೊಂಬಣ್ಣ ಉಮಾಪತಿ, ಆಡಳಿತ ಡೀನ್ ಡಾ.ಟಿ.ಡಿ. ವಿಷ್ಣುಮೂರ್ತಿ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಸಂಘದ ಡೀನ್ ಡಾ. ಮಂಜನಾಯ್ಕ ಇದ್ದರು.
ಕಾರ್ಯಕ್ರಮ ಸಂಯೋಜಕ ಡಾ.ಎಸ್. ಮಂಜಪ್ಪ ಸ್ವಾಗತಿಸಿದರು. ಐ.ಅಂಡ್ ಪಿ ವಿಭಾಗ ಪ್ರೊ.ಎಂ.ಎಚ್. ದಿವಾಕರ್ ಕಾರ್ಯಕ್ರಮ ನಿರೂಪಿದರು , ಶೈಕ್ಷಣಿಕ ಡೀನ್ ಡಾ. ಈರಪ್ಪ ಸೊಗಲದ್ ವಂದಿಸಿದರು.