ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ವಿದ್ಯಾರ್ಥಿಗಳು, ಉದ್ಯೋಗ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಜಾಬ್ ಕಾರ್ಡ್ ಮಾಡಿಸಲು ಬೆಂಗಳೂರನ್ನೇ ಅವಲಂಬಿಸಬೇಕಾಗಿದೆ. ಜಿಲ್ಲೆಯ ಹಲವು ವಿದ್ಯಾರ್ಥಿಗಳು, ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಉದ್ಯೋಗ ಹುಡುಕಾಟ ನಡೆಸುತ್ತಿರುವುದು ಒಂದೆಡೆಯಾದರೆ ಉದ್ಯೋಗದ ಮಾಹಿತಿ ಪಡೆಯಲೂ ಜಿಲ್ಲೆಯಲ್ಲಿ ಅವಕಾಶವಿಲ್ಲದಂತಾಗಿದ್ದು, ಜಾಬ್ಕಾರ್ಡ್‌ಗೆ ಬೆಂಗಳೂರು ಬಸ್ ಹತ್ತುವಂತಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣಗೊಂಡು 8 ವರ್ಷಗಳೇ ಕಳೆಯುತ್ತಾ ಬಂದಿದೆ. ಹಲವು ಇಲಾಖೆಗಳು ಜಿಲ್ಲಾಡಳಿತ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯೂ ಇದೇ ಜಿಲ್ಲಾಡಳಿತ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಆದರೆ ಇದರಿಂದ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಜಿಲ್ಲೆಯಲ್ಲಿ ಉದ್ಯೋಗ ವಿನಿಮಯ ಕೇಂದ್ರ ಇಲ್ಲದಿರುವುದೂ ವಿದ್ಯಾರ್ಥಿಗಳ ಪರದಾಟಕ್ಕೆ ಕಾರಣವಾಗಿದೆ.
ಮಾರ್ಗದರ್ಶನ ಕೊರತೆ: ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿರುವ ಜಿಲ್ಲೆಯಲ್ಲಿ ಸಾಕಷ್ಟು ಕೈಗಾರಿಕೆಗಳು ತಲೆ ಎತ್ತುತ್ತಿವೆ ಅದೇ ರೀತಿ ಸಾವಿರಾರು ಉದ್ಯೋಗಾವಕಾಶಗಳು ಹೆಚ್ಚುತ್ತಿವೆ. ಆದರೆ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಅವಕಾಶಗಳ ಬಗ್ಗೆ ಸರಿಯಾದ ಮಾರ್ಗದರ್ಶನ ಕೊರತೆ ಎದುರಾಗಿದೆ. ಅಭ್ಯರ್ಥಿಗಳು ಯಾರನ್ನು ಸಂಪರ್ಕಿಸಿ ಉದ್ಯೋಗ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.
ಡಿಸಿ ಕಚೇರಿಯಲ್ಲಿ ಸ್ಥಗಿತ: ಈ ಸಮಸ್ಯೆಗಳನ್ನು ಮನಗಂಡು ಐದಾರು ತಿಂಗಳ ಹಿಂದೆ ಹಿಂದಿನ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಆದೇಶದ ಮೇರೆಗೆ ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯಲ್ಲಿ ಪ್ರತಿ ಗುರುವಾರ ಜಾಬ್ ಕಾರ್ಡ್ ಮಾಡಿಸಲಾಗುತ್ತಿತ್ತು. ಈಗ ಅದು ಕೂಡ ಸಂಪೂರ್ಣ ನಿಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸಿ ಜಾಬ್ ಕಾರ್ಡ್ ಇಲ್ಲಿಯೇ ಮಾಡುವ ಸೌಲಭ್ಯವಿದ್ದರೆ ಜಿಲ್ಲೆಯ ಜನತೆಗೆ ಹೆಚ್ಚೆಚ್ಚು ಉದ್ಯೋಗ ಅವಕಾಶಗಳು ಸಿಗುತ್ತವೆ ಎನ್ನುವುದು ಅಭ್ಯರ್ಥಿಗಳ ಆಶಯವಾಗಿದೆ.
ಮೇಳಗಳಿಂದ ಅನುಕೂಲ: ಜಿಲ್ಲೆಯಲ್ಲಿ ಇತ್ತೀಚಿಗೆ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಜಿಲ್ಲಾಡಳಿತದ ವತಿಯಿಂದ ಬೃಹತ್ ಉದ್ಯೋಗ ಮೇಳ ಏರ್ಪಡಿಸಲಾಗಿತ್ತು. ಸಾವಿರಾರು ಅಭ್ಯರ್ಥಿಗಳು ಈ ಮೇಳದ ಪ್ರಯೋಜನ ಪಡೆದರು. ಸಾಕಷ್ಟು ಮಂದಿಗೆ ಅವಕಾಶ ಸಿಗಲಿಲ್ಲ. ಉದ್ಯೋಗವಕಾಶಕ್ಕಾಗಿ ಸಾಕಷ್ಟು ಮಂದಿ ಅಲೆದಾಡುತ್ತಿದ್ದಾರೆ. ಮುಖ್ಯವಾಗಿ ಮಾಹಿತಿ ಕೊರತೆಯಿಂದ ಉದ್ಯೋಗ ಭಾಗ್ಯವಿಲ್ಲದಂತಾಗಿದೆ. ಜಿಲ್ಲೆಯಲ್ಲಿನ ಕೈಗಾರಿಕಾ ವಲಯಗಳಲ್ಲಿ ಸಾಕಷ್ಟು ಉದ್ಯೋಗವಿದ್ದರೂ ಬೆಂಗಳೂರಿಗೆ ಹೋಗಿ ಬರುವಂತ ಅನಿವಾರ್ಯತೆ ನಿರ್ಮಾಣವಾಗಿದೆ ಆದ್ದರಿಂದ ಕೂಡಲೇ ಜಿಲ್ಲೆಯಲ್ಲಿ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸಿ ಜಾಬ್‌ಕಾರ್ಡ್ ಮಾಡಿಸುವ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂಬುದು ಜಿಲ್ಲೆಯ ಸಾವಿರಾರು ಅಭ್ಯರ್ಥಿಗಳ ಒತ್ತಾಯವಾಗಿದೆ.
ಗ್ರಾಮಾಂತರ ಜಿಲ್ಲೆಯಲ್ಲಿ ಉದ್ಯೋಗ ವಿನಿಮಯ ಕೇಂದ್ರ ಇಲ್ಲದಿರುವ ಬಗ್ಗೆ ಮಾಹಿತಿ ಬಂದಿದೆ, ಸಾಕಷ್ಟು ಅಭ್ಯರ್ಥಿಗಳು ಮನವಿ ಮಾಡಿದ್ದಾರೆ. ಇದೊಂದು ಉತ್ತಮವಾದ ಕೆಲಸವಾಗಿದ್ದು, ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಬಹಳ ಅನುಕೂಲವಾಗಲಿದೆ ಆದ್ದರಿಂದ ಈ ಕೂಡಲೇ ಸರ್ಕಾರಕ್ಕೆ ಪತ್ರ ಬರೆದು ಉದ್ಯೋಗ ಮಿನಿಮಯ ಕೇಂದ್ರ ಆರಂಭಕ್ಕೆ ಕ್ರಮಕೈಗೊಳ್ಳಲಾಗುವುದು.
ಎ.ಬಿ.ಬಸವರಾಜು, ಜಿಲ್ಲಾಧಿಕಾರಿ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸುವುದರಿಂದ ಉದ್ಯೋಗ ಹುಡುಕಲು ನಮಗೆ ಅನುಕೂಲವಾಗಲಿದೆ. ಈ ಹಿಂದೆ ಕೆಲವು ದಿನಗಳವರೆಗೆ ದೇವನಹಳ್ಳಿಯ ಜಿಲ್ಲಾಡಳಿತಭವನದಲ್ಲಿ ಜಾಬ್ ಕಾರ್ಡ್ ಮಾಡಿಕೊಡಲಾಗುತ್ತಿತ್ತು ಆದರೆ ಇತ್ತೀಚಿಗೆ ಅದನ್ನು ನಿಲ್ಲಿಸಿದ್ದಾರೆ ಕಾರಣ ಏನು ಎಂಬುದು ತಿಳಿದಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನ ನೀಡಿದರೆ ಬಹಳಷ್ಟು ಮಂದಿಗೆ ಅನುಕೂಲವಾಗಲಿದೆ.
ಸುಷ್ಮಾ, ಉದ್ಯೋಗಾಕಾಂಕ್ಷಿ ದೇವನಹಳ್ಳಿ