ಮೈಸೂರು: ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಬಹುಜನ ವಿದ್ಯಾರ್ಥಿ ಸಂಘ, ಎಸ್‌ಎಫ್‌ಐ, ಎಐಡಿಎಸ್‌ಒ ಸಂಘಟನೆಗಳಿಂದ ನಗರದ ಮಾನಸಗಂಗೋತ್ರಿಯಲ್ಲಿ ಬುಧವಾರ ಪಂಜಿನ ಮೆರವಣಿಗೆ ನಡೆಯಿತು.
ಕೆಲವು ಸಂಘಟನೆಗಳು ರಾತ್ರಿ ವೇಳೆ ಮಹಿಳಾ ವಿದ್ಯಾರ್ಥಿ ನಿಲಯಕ್ಕೆ ನುಗ್ಗಿ ಅಲ್ಲಿನ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿದ್ದಾರೆ. ಕೃತ್ಯದಲ್ಲಿ ಎಬಿವಿಪಿ, ಆರ್‌ಎಸ್‌ಎಸ್, ಭಜರಂಗದಳ ಹಾಗೂ ಕೆಲವು ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದು, ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಲಾಯಿತು.
ಫ್ರೀ ಕಾಶ್ಮೀರ ಫಲಕ: ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಯೊಬ್ಬ ‘ಫ್ರೀ ಕಾಶ್ಮೀರ’ ಫಲಕ ಹಿಡಿದು ಗಮನ ಸೆಳೆದ. ಇದೇ ರೀತಿ ದೆಹಲಿಯಲ್ಲಿ ‘ಫ್ರೀ ಕಾಶ್ಮೀರ’ ಫಲಕ ಹಿಡಿದು ಘೋಷಣೆ ಕೂಗಿದ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಪ್ರತಿಭಟನೆಯಲ್ಲಿ ಸಂಶೋಧಕರ ಸಂಘದ ಅಧ್ಯಕ್ಷ ಎಸ್. ಮರಿದೇವಯ್ಯ, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸಂದೇಶ್, ಬಿವಿಎಸ್ ಅಧ್ಯಕ್ಷ ಸಂದೀಪ್, ಎಸ್‌ಎಫ್‌ಐ ಅಧ್ಯಕ್ಷ ವಿಷ್ಣು, ಎಐಡಿಎಸ್‌ಒ ಅಧ್ಯಕ್ಷ ಚಂದ್ರಕಲಾ ಇತರರು ಪಾಲ್ಗೊಂಡಿದ್ದರು.