ತುಮಕೂರು:
ಅಪಾಯಗಳನ್ನು ಸ್ವೀಕರಿಸಲು ಹಾಗೂ ನಿಮ್ಮ ಧ್ಯೇಯೋತ್ಸಾಹದ ಬೆನ್ನುಹತ್ತಲು ಭಯಪಡಬೇಡಿ. ವೈಫಲ್ಯದ ಭಯಬಿಟ್ಟು ಧೈರ್ಯವಾಗಿ ದೊಡ್ಡಕನಸು ಕಾಣಿ, ನಿಮ್ಮನ್ನು ಹಿಡಿದಿಟ್ಟುಕೊಳ್ಳಬೇಡಿ ಎಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಕುಲಪತಿ ಪ್ರೊ.ಸಾಂತಿಶ್ರೀ ಧೂಳಿಪುಡಿ ಪಂಡಿತ್ ಹೇಳಿದರು.
ಸೋಮವಾರ ತುಮಕೂರು ವಿವಿ 16ನೇ ಘಟಿಕೋತ್ಸವದಲ್ಲಿ ಭಾಷಣ ಮಾಡಿದ ಅವರು, ನಿಮಗೆ ಪರಿಚಿತವಾದುದನ್ನು ಅಪ್ಪಿಕೊಳ್ಳಿ, ನಿಮ್ಮ ಸಾಮರ್ಥ್ಯದ ಮೇಲೆ ಅಚಲವಾದ ನಂಬಿಕೆಯಿರಲಿ. ಅವಕಾಶಗಳನ್ನು ಬಿಡದೆ ಬಾಚಿಕೊಳ್ಳಿ, ಅಪಾಯವನ್ನು ಧೈರ್ಯವಾಗಿ ಸ್ವೀಕರಿಸಿ ಮತ್ತು ಅಸಾಧಾರಣ ಪಯಣದಲ್ಲಿ ತೊಡಗಿ. ಅದಮ್ಯ ವಿಶ್ವಾಸದಿಂದ ಅಸಾಧ್ಯವಾದುದನ್ನು ಸಾಧಿಸಿದೆ ಎಂದು ಮುಂದಿನ ಪೀಳಿಗೆಗೆ ಹೇಳುವುದರಲ್ಲಿರುವ ಸಂತೋಷ ಮತ್ತೊಂದರಲಿಲ್ಲ ಎಂದರು.
ನಿಮ್ಮ ಜೀವನದ ಹೊಸ ಘಟಕ್ಕೆ ನೀವು ಕಾಲಿಡುತ್ತಿರುವ ಈ ಹೊತ್ತಿನಲ್ಲಿ ನಿಮ್ಮ ಶೈಕ್ಷಣಿಕ ಪಯಣದ ಅಮೂಲ್ಯ ಕ್ಷಣಗಳನ್ನು ಮೆಲುಕು ಹಾಕುತ್ತಾ ಮುಂದೆ ಬರಲಿರುವ ಅನಿಶ್ಚಿತತೆಗಳಿಗೆ ಸಿದ್ಧರಾಗಿ. ದೊಡ್ಡದಾಗಿ ಕನಸು ಕಾಣಿ, ಏಕೆಂದರೆ ನೀವೇ ಈ ಮಹಾನ್ ದೇಶದ ಭವಿಷ್ಯ. ನಿಮ್ಮ ಪೂರ್ವಜರು, ಶಿಕ್ಷಕರು ಮತ್ತು ಇನ್ನೂ ಹಲವಾರು ಮಂದಿ ತಮ್ಮ ಅವಿರತ ದುಡಿಮೆಯ ಫಲವಾಗಿ ನಿಮ್ಮ ಮುಂದಿಟ್ಟಿರುವ ದೊಡ್ಡ ಅವಕಾಶಗಳನ್ನು ಬಳಸಿಕೊಳ್ಳಿ ಎಂದು ಕರೆನೀಡಿದರು.
ಸವಾಲುಗಳನ್ನು ತೆರೆದ ತೋಳುಗಳಿಂದ ಸ್ವೀಕರಿಸಿ, ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ಮೂಲಕ ಸಕಾರಾತ್ಮಕ ಪರಿಣಾಮ ತರಲು ಪ್ರಯತ್ನಿಸಿ, ನಿರ್ಭೀತರಾಗಿ ಅಪಾಯಗಳನ್ನು ಸ್ವೀಕರಿಸಿ. ಆ ಪರಿವರ್ತನೆಯ ಭಾಗವಾಗಲು ಇದೇ ಸುಸಮಯ, ಭಾರತದ ಯಶೋಗಾಥೆಗೆ ನಿಮ್ಮ ಕೊಡುಗೆ ನೀಡಬೇಕು ಎಂದರು.
ಪ್ರಗತಿಗೆ ಸಾಟಿ ಇಲ್ಲ !: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಾಡಿರುವ ತಂತ್ರಜ್ಞಾನದ ಪ್ರಗತಿಗೆ ಸಾಟಿ ಇಲ್ಲ, ಇದು ನಮ್ಮ ಜಾಣ್ಮೆ ಮತ್ತು ಮಿತವ್ಯಯ ಚಾತುರ್ಯ ತೋರಿಸುತ್ತದೆ. ನೂರು ಮಿಲಿಯನ್ ಡಾಲರ್‌ಗಳಿಗೂ ಕಡಿಮೆ ವೆಚ್ಚದಲ್ಲಿ ಯಶಸ್ವಿಯಾಗಿ ಕೈಗೊಂಡ ಮೊದಲ ಮಂಗಳಯಾನ ಅಥವಾ ಇತ್ತೀಚಿನ ಚಂದ್ರಯಾನ-3ರ ಉಡಾವಣೆಗಳೆಲ್ಲವೂ ನಮ್ಮ ದೇಶದ ವಿಜ್ಞಾನಿಗಳ ಸಾಮರ್ಥ್ಯ ತೋರಿಸುತ್ತವೆ ಎಂದು ಪ್ರೊ.ಸಾಂತಿಶ್ರೀ ಹೇಳಿದರು.
ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್‌ನಂತಹ ಯೋಜನೆಗಳು ಹೊಸ ಹುರುಪನ್ನು ಸೃಷ್ಠಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇಡೀ ವಿಶ್ವವೆ ತನ್ನತ್ತ ನೋಡುವ ಹಾಗೆ ಅಭಿವೃದ್ದಿ ಹೊಂದುತ್ತಿದೆ. ವಿದ್ಯಾರ್ಥಿಗಳು ಕುಗ್ಗಿದಾಗ ಒಮ್ಮೆ ಮಹಾರಾಣಾ ಪ್ರತಾಪ್, ಸಾವಿತ್ರಿಬಾಯಿ ಪುಲೆ, ಛತ್ರಪತಿ ಶಿವಾಜಿ, ಅಹಲ್ಯಾಭಾಯಿ ಹೋಲ್ಕರ್, ರುದ್ರಮ್ಮ ದೇವಿ, ಸ್ವಾಮಿ ವಿವೇಕಾನಂದ, ಕಿತ್ತೂರು ಚನ್ನಮ್ಮ ಸೇರಿದಂತೆ ಇನ್ನೂ ಮುಂತಾದ ಮಹನೀಯರು ಪಟ್ಟ ಶ್ರಮದ ಬಗ್ಗೆ ಓದಿ ಎಂದು ಹೇಳಿದರು.
ವಿವಿ ಕುಲಾಧಿಪತಿಗಳಾದ, ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಉನ್ನತಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕುಲಸಚಿವ ನಹೀದಾ ಜಮ್‌ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್ ಮತ್ತಿತರು ಉಪಸ್ಥಿತರಿದ್ದರು.