ಶಿವಮೊಗ್ಗ: ಜಮೀನಿನ ವ್ಯಾಜ್ಯದಲ್ಲಿ ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಐವರಿಗೆ ಶಿಕಾರಿಪುರದ 1ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 48,000 ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲನಾದರೆ 3 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
ಶಿಕಾರಿಪುರ ತಾಲೂಕಿನ ಮಳುವಳ್ಳಿ ಗ್ರಾಮದ ಸುರೇಶಪ್ಪ (55), ಸಣ್ಣಗೌಡಪ್ಪ (34), ಉಮೇಶಪ್ಪ (40), ಸಂತೋಷ (23) ಮತ್ತು ಕುಸುಮಮ್ಮ (45) ಶಿಕ್ಷೆಗೆ ಒಳಗಾದವರು. ಇವರು 2014ರ ನ.7ಂದು ಮಳವಳ್ಳಿ ಗ್ರಾಮದ ಚನ್ನಬಸಪ್ಪ (65) ಅವರ ಮೇಲೆ ಜಮೀನಿನ ವ್ಯಾಜ್ಯದ ವಿಚಾರವಾಗಿ ಹಲ್ಲೆ ನಡೆಸಿದ್ದರು.
ಈ ಬಗ್ಗೆ ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಯಾಗಿದ್ದ ಶಿರಾಳಕೊಪ್ಪ ಠಾಣೆ ಪಿಎಸ್‌ಐ ಡಿ.ಶಿವಕುಮಾರ್ ಅವರು ನ್ಯಾಯಾಲಯಕ್ಕೆ ದೋಷಾರೋಷಣ ಪಟ್ಟಿ ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ಅವಿನಾಶ ಎಂ ಗಾಲಿ ಅವರು ಆರೋಪಗಳು ಸಾಬೀತಾಗಿದ್ದರಿಂದ ಐವರಿಗೂ ಕಾರಾವಾಸ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಎಸ್.ಎಂ.ಅರುಣಕುಮಾರ್ ವಾದ ಮಂಡಿಸಿದ್ದರು.