ಹನುಮಸಾಗರ: ವಾರ್ಡ್‌ನ ಸದಸ್ಯರು ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಬೇಕೆಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವೇಂದ್ರಪ್ಪ ಕಮತರ ಹೇಳಿದರು.
ಗ್ರಾಪಂ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ವಿವಿಧ ವಸತಿ ಯೋಜನೆಯಡಿ ಒಟ್ಟು 54 ಮನೆಗಳು ಗ್ರಾಪಂಗೆ ಮಂಜೂರಾಗಿದ್ದು, ಮೀಸಲಾತಿ ಅನುಗುಣವಾಗಿ ಹಂಚಿಕೆ ಮಾಡಬೇಕಾಗಿದೆ. ವಸತಿ ರಹಿತ ಬಡವರಿಗೆ ಮನೆಗಳು ಸಿಗಲಿ ಎಂದರು.
ಜಲ ಜೀವನ ಮಿಷನ್ ಪೈಪ್‌ಲೈನ್ ಕಾಮಗಾರಿ ಎರಡು ವರ್ಷದಿಂದ ನಡೆಯುತ್ತಿದ್ದು, ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಅರೆಬರೆಯಾದ ಕಾಮಗಾರಿಯಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಕೆಲ ವಾರ್ಡ್‌ಗಳಿಗೆ ನೀರು ಪೂರೈಕೆಯಾದರೆ, ಇನ್ನೂ ಕೆಲವು ವಾರ್ಡ್‌ಗಳಿಗೆ ನೀರಿನ ಸಮಸ್ಯೆ ಆಗುತ್ತಿದೆ. ಗುಂಪು ಮನೆಗಳ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ. ಆದರೆ, ನಿವೇಶನಗಳು ಎಲ್ಲಿ ಬರುತ್ತವೆ ಎಂದು ಗುರುತಿಸಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಪಿಡಿಒ ದೇವೇಂದ್ರಪ್ಪ ಕಮತರ ಪ್ರತಿಕ್ರಿಯಿಸಿ, ಶುದ್ಧ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಮಾಡುತ್ತಿರುವವರಿಗೆ ಬೇಗನೆ ಕೆಲಸ ಪೂರ್ಣಗೊಳಿಸಿ ಎಂದು ಸೂಚಿಸಲಾಗಿದೆ. ನೀರು ಗಂಟಿಯನ್ನು ಕರೆಯಿಸಿ, ಸಮಸ್ಯೆ ಇರುವ ವಾರ್ಡ್‌ನ ಸದಸ್ಯರೊಂದಿಗೆ ಮತ್ತೊಮ್ಮ ಚರ್ಚಿಸಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ನಾಗಪ್ಪ ನಿರ್ವಾಣಿ, ಉಪಾಧ್ಯಕ್ಷ ಮಂಜುನಾಥ ಹುಲ್ಲೂರು, ಎಸ್‌ಡಿಎ ವೀರನಗೌಡ ಪಾಟೀಲ್, ಗ್ರಾಪಂ ಸದಸ್ಯರು ಮತ್ತು ಸಿಬ್ಬಂದಿ ಇದ್ದರು.