ವಿಜಯಪುರ: ಕಳೆದ ಎರಡ್ಮೂರು ದಿನಗಳಿಂದ ಜಿಲ್ಲಾದ್ಯಂತ ಬಿಡುವಿಲ್ಲದ ಸಂಚಾರ ನಡೆಸಿರುವ ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ ಸರ್ಕಾರದ ವಿವಿಧ ಕಾಮಗಾರಿಗಳು, ಯೋಜನೆಗಳ ಅನುಷ್ಟಾನ ಹಾಗೂ ಮೂಲ ಸೌಕರ್ಯಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದರು.
ಸೋಮವಾರ ಬಸವನಬಾಗೇವಾಡಿ ಹಾಗೂ ನಿಡಗುಂದಿ ತಾಲ್ಲೂಕುಗಳ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು, ಗುಣಮಟ್ಟದ ಕಾಮಗಾರಿ ಕೈಗೊಳ್ಳುವಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜವಾಬ್ದಾರಿ ಎಷ್ಟಿದೆಯೋ ಕಾಮಗಾರಿ ಗುಣಮಟ್ಟ ಕಾಪಾಡಿಕೊಳ್ಳುವುದು, ಸದುಪಯೋಗ ಪಡೆದುಕೊಳ್ಳುವ ಜವಾಬ್ದಾರಿ ಸಾರ್ವಜನಿಕರ ಮೇಲೂ ಇದೆ. ಹೀಗಾಗಿ ಸಾರ್ವಜನಿಕರು ಸರ್ಕಾರದ ಭಾಗವಾಗಿ ಜವಾಬ್ದಾರಿಗಳನ್ನು ನಿಭಾಯಿಸಬೇಕು. ಕಾಮಗಾರಿಗಳು ಗುಣಮಟ್ಟದಿಂದ ಆಗುವಂತೆ ನೋಡಿಕೊಳ್ಳಬೇಕಲ್ಲದೇ ಪೂರ್ಣಗೊಂಡಿರುವ ಕಾಮಗಾರಿಗಳಿಂದ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಬಸವನಬಾಗೇವಾಡಿ ತಾಲ್ಲೂಕಿನ ಮಣ್ಣೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗೂರ, ಮಣ್ಣೂರ ಹಾಗೂ ಹಂಗರಗಿ, ನಿಡಗುಂದಿ ತಾಲೂಕಿನ ಚಿಮ್ಮಲಗಿ ಎಲ್‌ಟಿ, ಮರಿಮಟ್ಟಿ, ಆಲಮಟ್ಟಿ, ಆಲಮಟ್ಟಿ ವಸ್ತಿ, ಬೇನಾಳ ಆರ್‌ಸಿ, ಗುಡದಿನ್ನಿ, ಹುಣಶ್ಯಾಳ ಪಿಸಿ, ಬೀರಲದಿನ್ನಿ ಹಾಗೂ ಗೊಳಸಂಗಿ ಗ್ರಾಮಗಳಿಗೆ ಭೇಟಿ ನೀಡಿ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳ ಸ್ಥಳ ವೀಕ್ಷಣೆ ಮಾಡಿದ ಅವರು, ಮನೆ ಮನೆಗಳಿಗೆ ಅಳವಡಿಸಲಾಗಿರುವ ನಳಗಳ ಸಂಪರ್ಕ ಬಗ್ಗೆ ಫಲಾನುಭವಿಗಳೊಂದಿಗೆ ಚರ್ಚೆ ಮಾಡಿದರು.
ಮಣ್ಣೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗೂರ ಗ್ರಾಮದಲ್ಲಿನ ಕಾಮಗಾರಿ ವೀಕ್ಷಿಸಿ ಮನೆಗಳಿಗೆ ಅಳವಡಿಸಿರುವ ನಳಗಳನ್ನು ಪರೀಕ್ಷಿಸಿ ನೀರಿನ ಗುಣಮಟ್ಟವನ್ನು ಪರಿಶೀಲಿಸಿದ ಅವರು, ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿರುವ ಕುರಿತು ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು.
ಮಣ್ಣೂರ ಗ್ರಾಮದಲ್ಲಿ ಪ್ರಗತಿ ಹಂತದಲ್ಲಿರುವ ಕಾಮಗಾರಿ ವೀಕ್ಷಿಸಿ ಕಾರ್ಯಾತ್ಮಕ ನಳಗಳನ್ನು ಅಳವಡಿಸಲು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಸಹಾಯಕ ಅಭಿಯಂತರರಿಗೆ ಹಾಗೂ ಗ್ರಾಮದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ನಿಡಗುಂದಿ ತಾಲೂಕಿನ ವಂದಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಶ್ಯಾಳ ಪಿಸಿ ಗ್ರಾಮದ ಕನ್ನಡ ಗಂಡು ಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಮಧ್ಯಾಹ್ನದ ಬಿಸಿಯೂಟ ಗುಣಮಟ್ಟ ಪರಿಶೀಲಿಸಿ ಮಕ್ಕಳೊಂದಿಗೆ ಬಿಸಿಯೂಟ ಸವಿದರು.
ಶಾಲೆಯಲ್ಲಿನ ಕಟ್ಟಡದ ಸ್ಥಿತಿ-ಗತಿ, ಪಾಠ ಬೋಧನೆ, ಸರ್ಕಾರದಿಂದ ಮಕ್ಕಳಿಗೆ ಒದಗಿಸುವ ಸಮವಸ್ತ್ರ, ಪುಸ್ತಕ, ಕ್ಷೀರಭಾಗ್ಯದಡಿ ಹಾಲು ವಿತರಣೆ ಮುಂತಾದ ಯೋಜನೆಗಳ ಅನುಷ್ಠಾನದ ಬಗ್ಗೆ ಶಾಲಾ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು. ಶಾಲೆಯ ಆವರಣದಲ್ಲಿ ಮಹಾತ್ಮ ಗಾಂಧಿ ನರೇಗಾದಡಿ ಅನುಷ್ಟಾನಗೊಂಡ ತಡೆಗೋಡೆ ನಿರ್ಮಾಣ, ಅಡುಗೆ ಕೋಣೆ ಹಾಗೂ ಹೈಟೆಕ್ ಶೌಚಗೃಹ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಿಡಗುಂದಿ ಇಒ ವೆಂಕಟೇಶ ವಂದಾಲ, ಬಸವನಬಾಗೇವಾಡಿ ಇಒ ಪ್ರಕಾಶ ದೇಸಾಯಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಕುಂಬಾರ, ಸಹಾಯಕ ಅಭಿಯಂತರ ವಿ.ಬಿ.ಗೊಂಗಡಿ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಶ್ರೀನಿವಾಸ, ಪಿಡಿಒ ರವಿ ಗುಂಡಳ್ಳಿ, ಆಲಮಟ್ಟಿ ಪಿಡಿಒ ಜಿ.ಬಿ. ಕಲ್ಯಾಣಿ, ವಂದಾಲ ಪಿಡಿಒ ಮಲ್ಲಿಕಾರ್ಜುನ ಹಾವರಗಿ, ಬೇನಾಳ ಪಿಡಿಒ ಎ.ಎ. ಕೀಜಿ, ಬೇನಾಳ ಗ್ರಾಪಂ ಅಧ್ಯಕ್ಷ ರಮೇಶ ವಂದಾಲ, ಮಣ್ಣೂರು ಪಿಡಿಒ ಎಸ್.ವೈ. ಕುಂಬಾರ ಮತ್ತಿತರರಿದ್ದರು.