ಶಿವು ತೂಬಗೆರೆ
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಗ್ರಾಪಂ ವ್ಯಾಪ್ತಿಯ ಕೊಂಡಸಂದ್ರದಲ್ಲಿ ಜಲಜೀವನ್ ಮಿಷನ್ ಯೋಜನೆಗೆ ಗ್ರಹಣ ಹಿಡಿದಿದೆ. ಕಳೆದ ನಾಲ್ಕೈದು ತಿಂಗಳಿಂದ ಕಾಮಗಾರಿ ಸ್ಥಗಿತವಾಗಿದ್ದು, ಪೈಪ್‌ಗಳು ಹಾಗೂ ಮತ್ತಿತರ ಪರಿಕರಗಳು ಎಲ್ಲೆಂದರಲ್ಲೆ ಅನಾಥವಾಗಿ ಬಿದ್ದಿವೆ.
ಗ್ರಾಮೀಣ ಭಾಗದ ಪ್ರತಿ ಮನೆಗಳಿಗೆ ಕೊಳಾಯಿ ಮೂಲಕ ಕುಡಿಯುವ ನೀರು ತಲುಪಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಜಲಜೀವನ್ ಮಿಷನ್ ಯೋಜನೆ ಈಗಾಗಲೇ ಜಿಲ್ಲೆಯ ಹಲವು ಕಡೆಗಳಲ್ಲಿ ವಿಲವಾಗಿರುವ ದೂರು ಕೇಳಿಬರುತ್ತಿದೆ. ಇದಕ್ಕೆ ಕೊಂಡಸಂದ್ರ ಗ್ರಾಮವೂ ಸೇರಿದೆ.
ಗ್ರಾಮದಲ್ಲಿ ನಾಲ್ಕೈದು ತಿಂಗಳ ಹಿಂದೆ ರಸ್ತೆಗಳನ್ನು ಅಗೆದು ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಆರಂಭಿಸಲಾಯಿತು. ಆದರೆ ಇದ್ದಕ್ಕಿದ್ದಂತೆ ಕಾಮಗಾರಿ ಸ್ಥಗಿತಗೊಂಡಿದ್ದು, ಅಧಿಕಾರಿಗಳು ಇತ್ತ ಸುಳಿಯುತ್ತಿಲ್ಲ. ಇದರಿಂದ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣ ಕಂಡುಬರುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ತೂಬಗೆರೆ ಸುತ್ತಮುತ್ತಲಿನಲ್ಲಿ ಪೈಪ್‌ಲೈನ್ ಕಾರ್ಯ ಮುಗಿದಿದೆ. ಆದರೆ ಇದೇ ಪಂಚಾಯಿತಿಗೆ ಸೇರಿದ ಕೊಂಡಸಂದ್ರ ಗ್ರಾಮದಲ್ಲಿ ನಾಲ್ಕು ತಿಂಗಳ ಹಿಂದೆ ಪೈಪ್‌ಗಳನ್ನು ರಸ್ತೆ ಬದಿ ಹಾಕಿ ಹೋಗಿದ್ದು, ಕೆಲವೆಡೆ ರಸ್ತೆ ಅಗೆದಿರುವುದನ್ನು ಹೊರತುಪಡಿಸಿ ಕಾಮಗಾರಿಗೆ ಚಾಲನೆ ದೊರಕಿಲ್ಲ.
ಟ್ಯಾಂಕ್‌ಗೆ ಜಾಗ ಇಲ್ಲ!
ಈ ಯೋಜನೆಯಡಿ ಮನೆ ಮನೆಗೆ ನೀರು ತಲುಪಿಸಲು ಗ್ರಾಮದಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣದ ಅವಶ್ಯಕತೆ ಇದ್ದು, ಟ್ಯಾಂಕ್ ನಿರ್ಮಾಣಕ್ಕೆ ಜಾಗದ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ. ಸರ್ಕಾರಿ ಜಾಗದಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ಸ್ಥಳೀಯವಾಗಿ ಜಾಗ ಗುರುತಿಸಿಕೊಡಬೇಕಿದೆ. ಆದರೆ ಅಧಿಕಾರಿಗಳು ಈ ಬಗ್ಗೆ ಕಾಳಜಿವಹಿಸುತ್ತಿಲ್ಲ ಎಂಬುದು ಗ್ರಾಮಸ್ಥರ ದೂರಾಗಿದೆ.
ಕಾಂಕ್ರೀಟ್ ರಸ್ತೆ ಹಾಳು:ಪೈಪ್‌ಲೈನ್ ಅಳವಡಿಕೆ ಕಾಮಗಾರಿಗಾಗಿ ಗ್ರಾಮಗಳ ಕಾಂಕ್ರೀಟ್ ರಸ್ತೆಗಳನ್ನು ಅಗೆಯಲಾಗಿದೆ, ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಕಿತ್ತುಹೋದ ರಸ್ತೆಗೆ ತೇಪೆ ಕಾಮಗಾರಿಯೂ ನಡೆಯುವಂತಿಲ್ಲ. ಇದರಿಂದ ಸಾರ್ವಜನಿಕ ಸಂಚಾರಕ್ಕೂ ತೊಂದರೆಯಾಗಿದೆ.
ಹಳ್ಳ ಹಿಡಿದ ಯೋಜನೆ: ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆ ಹಳ್ಳಹಿಡಿದಿದೆ, ಈ ಬಗ್ಗೆ ಇತ್ತೀಚೆಗೆ ಜಿಪಂ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಸಂಸದ ಬಿ.ಎನ್.ಬಚ್ಚೇಗೌಡ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದರು. ಅಲ್ಲದೆ ಖುದ್ದು ಜಲಜೀವನ್ ಯೋಜನೆ ೆಲ್ಯೂರ್ ಆಗಿದೆ ಎಂದು ಹೇಳಿದ್ದರು. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಇಒ ಕೆ.ಎನ್.ಅನುರಾಧಾ ಕಾಮಗಾರಿ ಚುರುಕುಗೊಳಿಸುವಂತೆ ತಾಕೀತು ಮಾಡಿದ್ದರು. ಆದರೆ ಇದೆಲ್ಲ ಪ್ರಕ್ರಿಯೆ ಸಭೆಗೆ ಸೀಮಿತವಾಗಿದೆ ಹೊರತು ಕಾರ್ಯರೂಪಕ್ಕೆ ಬಂದಿಲ್ಲ.
ಹಲವು ಹಳ್ಳಿಗಳಲ್ಲಿ ಜಲಜೀವನ್ ಯೋಜನೆ ಮುಕ್ತಾಯವಾಗಿದ್ದು ಕೊಳಾಯಿ ಮೂಲಕ ನೀರು ಹರಿಸುವುದಷ್ಟೇ ಬಾಕಿ ಇದೆ. ಆದರೆ ಕೊಂಡಸಂದ್ರ ಗ್ರಾಮದಲ್ಲಿ ನಾಲ್ಕು ತಿಂಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಸಿಮೆಂಟ್ ರಸ್ತೆ ಹಾಳು ಮಾಡಿದ್ದಲ್ಲದೆ ರಸ್ತೆಯಲ್ಲೇ ಪೈಪ್ ಬಿಸಾಡಿ ಹೋಗಿದ್ದಾರೆ, ಗ್ರಾಮ ಪಂಚಾಯಿತಿ ವತಿಯಿಂದ ಹಳೆಪೈಪ್ ಲೈನ್ ನಲ್ಲಿ ನೀರು ಬರುತ್ತಿದ್ದು ಕೆಲವೇ ದಿನಗಳಲ್ಲಿ ಪಂಚಾಯತಿಯವರು ನೀರು ನಿಲ್ಲಿಸುತ್ತಾರೆ, ಇದರಿಂದ ಮುಂದೆ ಕುಡಿವ ನೀರಿಗೆ ಪರದಾಡುವಂತಾಗುತ್ತದೆ.
ಗೋಪಾಲ್, ಕೊಂಡಸಂದ್ರ ಗ್ರಾಮಸ್ಥ
ಮನೆ ಮನೆಗೆ ಕೊಳಾಯಿ ಮೂಲಕ ನೀರು ಪೂರೈಸುವ ಯೋಜನೆಗೆ ಕೊಂಡಸಂದ್ರ ಗ್ರಾಮದಲ್ಲಿ ಗ್ರಹಣ ಹಿಡಿದಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಸ್ಥಗಿತಗೊಂಡಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವು ಬಾರಿ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ.
ಕೃಷ್ಣಪ್ಪ, ಗ್ರಾಪಂ ಸದಸ್ಯ