ಹಿರೀಸಾವೆ : ಶ್ರವಣಬೆಳಗೊಳ ಕ್ಷೇತ್ರದಲ್ಲಿ ನಡೆಯುತ್ತಿರುವ ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಮುಂದಿನ 15 ತಿಂಗಳಲ್ಲಿ ಪೂರ್ಣವಾಗಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಹೋಬಳಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ, ಸಂಜೀವಿನಿ ಶೇಡ್ ಹಾಗೂ ಶಾಲೆಯಲ್ಲಿನ ರಂಗ ಮಂದಿರ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಏತ ನೀರಾವರಿ ಯೋಜನೆ ಮೂಲಕ ಕೆಲವು ಕೆರೆಗಳನ್ನು ತುಂಬಿಸಲಾಗಿದೆ. ಮುಂದಿನ ದಿನಗಳಲ್ಲಿ ಹಿರೀಸಾವೆ ಹಾಗೂ ಮತಿಘಟ್ಟ ಕೆರೆಗೆ ನೀರು ಹರಿಸಲಾಗುವುದು. ಎನ್‌ಎಚ್ 75 ರ ಪಕ್ಕದಲ್ಲಿನ ಸರ್ವಿಸ್ ರಸ್ತೆಗಳು ಮತ್ತು ಆಂಡರ್ ಪಾಸ್ ನಿರ್ಮಾಣ ಮಾಡುವ ಬಗ್ಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಗ್ಯಾಸ್ ಹಾಗೂ ಹೊಲಿಗೆ ಯಂತ್ರಗಳ ವಿತರಣೆ ಮಾಡಲಾಯಿತು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವಿಕುಮಾರ್, ಮುಖಂಡರಾದ ಎಚ್.ಜಿ.ರಾಮಕೃಷ್ಣ, ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಬೋರಣ್ಣ, ಸದಸ್ಯರಾದ ಮಹೇಶ್, ಲೋಕೇಶ್, ಬಸವರಾಜು, ಗ್ರಾಪಂ ಪಿಡಿಒ ಸತೀಶ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಲೋಕೇಶ್, ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಮಂಜುನಾಥ್, ಶಿಕ್ಷಕ ಮೂರ್ತಿ, ಹಿರೀಸಾವೆ ಹೋಬಳಿಯ ಜೆಡಿಎಸ್ ಮುಖಂಡರು ಸೇರಿದಂತೆ ಗ್ರಾಮಸ್ಥರು ಇದ್ದರು.