ಕೋಲಾರ: ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ನಲ್ಲಿ ಮೂಲಕ ನೀರು ಸಬರಾಜು ಮಾಡಲು ಕಾಮಗಾರಿ ಕೈಗೆತ್ತಿಕೊಂಡಿದ್ದು, ಗುತ್ತಿಗೆದಾರ ಕೆಲಸವನ್ನು ಅಪೂರ್ಣಗೊಳಿಸಿ ಹೋಗಿದ್ದು, ಗುತ್ತಿಗೆದಾರನ ವಿರುದ್ಧ ಸಂಬಂಧ ಇಲಾಖಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಳೆದ ವರ್ಷ ಮಹಾಶಿವರಾತ್ರಿ ಹಬ್ಬದ ದಿನದಂದು ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರು ಕಾಮಗಾರಿಗೆ ಚಾಲನೆ ನೀಡಿದ್ದರು. 1.30 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಆರಂಭದಲ್ಲಿ ತರಾತುರಿಯಲ್ಲಿ ನಡೆಸಿದ ಗುತ್ತಿಗೆದಾರನು ಕೆಲಸ ಪೂರ್ಣಗೊಳಿಸಿಲ್ಲ. ಪೈಪ್ಲೈನ್ ಅಳವಡಿಸಲು ರಸ್ತೆ ಅಗೆದು ಸಂಪೂರ್ಣ ಹಾನಿ ಮಾಡಿದ್ದಾರೆ. ಇದರಿಂದಾಗಿ ರಸ್ತೆ ಸಂಚಾರಕ್ಕೂ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೋರ್ವೆಲ್ ಕೊರೆಯಿಸಿದ್ದರೂ ಪೈಪ್ಲೈನ್ ಕಾಮಗಾರಿಯಾಗಲಿ, ಓವರ್ಹೆಡ್ ಟ್ಯಾಂಕ್ ನಿರ್ಮಿಸುವ ಕೆಲಸಕ್ಕಾಗಲಿ ಮುಂದಾಗಿಲ್ಲ. ಕಾಮಗಾರಿ ಅಪೂರ್ಣದಿಂದಾಗಿ ಗ್ರಾಮದಲ್ಲಿ ಕೃತಕ ನೀರಿನ ಅಭಾವ ಉಂಟಾಗಿದ್ದು, ಕೂಡಲೇ ಅಧಿಕಾರಿಗಳು ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಂಡು ಬೇರೆ ಗುತ್ತಿಗೆದಾರರಿಗೆ ಜವಾಬ್ದಾರಿ ನೀಡಿ ಕಾಮಗಾರಿ ಪೂರ್ಣಗೊಳಿಸಿ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಗ್ರಾಮಸ್ಥರಾದ ಟಿ.ವಿ.ರಮೇಶ್, ಟಿ.ಜಿ.ಮುರಳಿ, ಟಿ.ಜಿ.ಮಲ್ಲಿಕಾರ್ಜುನ, ಬೈರರೆಡ್ಡಿ, ನಾರಾಯಣಸ್ವಾಮಿ, ಸರಿತಮ್ಮ, ನಾರಾಯಣಮ್ಮ, ಸುಜಾತಮ್ಮ ಸೇರಿ ಇತರರು ಒತ್ತಾಯಿಸಿದ್ದಾರೆ.