ಕುಷ್ಟಗಿ: ಜೆಜೆಎಂ ಕಾಮಗಾರಿ ಅನುಷ್ಠಾನದಲ್ಲಿ ಕರ್ತವ್ಯ ಲೋಪ ಎಸಗಿರುವ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ತಾಪಂ ಎಡಿ ಹನುಮಂತಗೌಡ ಪೊಲೀಸ್ ಪಾಟೀಲ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.
ಜೆಜೆಎಂ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಪೈಪ್‌ಲೈನ್‌ಗಾಗಿ ಸಿಸಿ ರಸ್ತೆಗಳನ್ನು ಅಗೆದು ಕೈಬಿಡಲಾಗಿದೆ. ಹಲವು ಕಡೆಗಳಲ್ಲಿ ಒಡೆದ ಪೈಪ್‌ಗಳಿಂದ ನೀರು ಪೋಲಾಗುತ್ತಿದೆ. ಬಹುತೇಕ ಮನೆಗಳಿಗೆ ಇದೂವರೆಗೂ ನಲ್ಲಿ ಸಂಪರ್ಕ ಕಲ್ಪಿಸಿಲ್ಲ. ಈ ಹಿಂದೆ ಬೇರೆ ಯೋಜನೆಗಳಲ್ಲಿ ಅಳವಡಿಸಿದ ಪೈಪ್‌ಗಳನ್ನೇ ಬಳಸಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ.
ಕರ್ತವ್ಯ ಲೋಪ ಎಸಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಈಗಲಾದರೂ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ಜನರಿಗೆ ಕುಡಿವ ನೀರಿನ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿದರು.
ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸನಗೌಡ ಪೊಲೀಸ್ ಪಾಡಟೀಲ್, ತಾಲೂಕು ಅಧ್ಯಕ್ಷ ಪ್ರಕಾಶ ಮನ್ನೇರಾಳ, ಗೌರವ ಅಧ್ಯಕ್ಷ ಆದಪ್ಪ ಉಳ್ಳಾಗಡ್ಡಿ, ಉಪಾಧ್ಯಕ್ಷ ಚನ್ನಪ್ಪ ನಾಲಗಾರ, ಮಹಿಳಾ ಘಟಕದ ಭುವನೇಶ್ವರಿ ಮೋಟಗಿ ಇತರರಿದ್ದರು.