ಜಿಲ್ಲೆ

ಒಳಿತು ಮಾಡದಿದ್ದರೂ ಕೆಡಕು ಮಾಡಬೇಡಿ ; ಭಾವೈಕ್ಯ ಧರ್ಮ ಸಮ್ಮೇಳನದದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಸಲಹೆ

Tumakuru

ಚಿಕ್ಕನಾಯಕನಹಳ್ಳಿ : ಸಮಾಜದಲ್ಲಿ ಎಲ್ಲರೂ ಸ್ವಾಮೀಜಿ. ರಾಜಕಾರಣಿಗಳಾಗಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ಭಕ್ತರಾಗಬೇಕು. ಎಲ್ಲರೂ ಸಮಾಜಕ್ಕಾಗಿ ಬಾಳಬೇಕು, ಬೇರೆಯವರಿಗೆ ಒಳಿತು ಮಾಡದಿದ್ದರೂ ಕೆಡಕು ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಕುಪ್ಪೂರು ಗದ್ದುಗೆ ಮಠದಲ್ಲಿ ಭಾನುವಾರ ರಾತ್ರಿ ಜಾತ್ರೆ ಪ್ರಯುಕ್ತ ಆಯೋಜಿಸಿದ್ದ ಭಾವೈಕ್ಯ ಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಶ್ವರನಲ್ಲಿ ನಂಬಿಕೆ ಇಡಬೇಕು, ಇರುವವರು ಇಲ್ಲದವರಿಗೆ ನೀಡಬೇಕು, ನಮ್ಮನ್ನು ನಾವು ಅರಿತು ಅರ್ಥ ಮಾಡಿಕೊಂಡು ಬದುಕಬೇಕು, ನಮ್ಮ ಅರಿವನ್ನು ಳಸಿದಾಗ ಶಕ್ತರಾಗುತ್ತೇವೆ, ಇಲ್ಲದಿದ್ದರೆ ನಾವು ಅಶಕ್ತರಾಗುತ್ತೇವೆ, ಕೈಲಾದ ಸಹಾಯ ಮಾಡಬೇಕು, ಭಗವಂತ ಮನುಷ್ಯನ ರೂಪದಲ್ಲೇ ಇರಬೇಕು ಎಂದರು.

ಯತೀಶ್ವರ ಶ್ರೀಗಳು ಇಲ್ಲದಿರುವುದು ಕಪ್ಪುಚುಕ್ಕೆ ಇಟ್ಟಾಂತಾಗಿದೆ. ಆದರೂ ಸಂಪ್ರದಾಯದಂತೆ ಈ ಕಾರ್ಯಕ್ರಮ ಮಾಡುತ್ತಿದ್ದು, ಈ ಮಠದ ಹಿರಿಯ ಶ್ರೀಗಳಾದ ಚಂದ್ರಶೇಖರ ಶಿವಚಾರ್ಯ ಸ್ವಾಮೀಜಿ ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದು, ಅವರಲ್ಲಿ ಅಪಾರವಾದ ಶಕ್ತಿ ಇತ್ತು. ಅವರ ನಂತರ ಬಂದ ಯತೀಶ್ವರರು ಈ ಮಠದ ದಿಕ್ಕನ್ನೇ ಬದಲಾಯಿಸಿದರು. ಜಾತ್ರೆ ನಡೆಯುತ್ತಿದ್ದ ಇಲ್ಲಿ ಸಾಂಸ್ಕೃತಿಕ ಉತ್ಸವ ಸೃಷ್ಟಿಸಿದರು. ಅನ್ನದಾಸೋಹದ ಜತೆಗೆ ಜ್ಞಾನ ದಾಸೋಹ ನೀಡಲು ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಿದ್ದರು ಎಂದರು.

ಪ್ರಾಸ್ತವಿಕ ನುಡಿಗಳನ್ನಾಡಿದ ಯಡಿಯೂರು ಕ್ಷೇತ್ರದ ರೇಣುಕಾ ಶಿವಚಾರ್ಯ ಸ್ವಾಮೀಜಿ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ ಯತೀಶ್ವರ ಶ್ರೀಗಳ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ನೋವಿನ ಸಂಗತಿ. ನಾವು ಜೀವನದಲ್ಲಿ ನಾಲ್ಕು ಪಾಠಗಳನ್ನು ಕಲಿಯಬೇಕು, ದೇವರಿದ್ದಾನೆ ಎಂಬ ನಂಬಿಕೆಯ ಪಾಠ, ಸಾವು ಬರುತ್ತದೆ ಎಂಬ ಪಾಠ, ಮನಸ್ಸನ್ನು ನೋಯಿಸದೆ ಇರುವುದೇ ಧರ್ಮ, ದಾನ ಮಾಡಿರುವುದನ್ನು ಮರೆಯುವ ಪಾಠ ಕಲಿಯಬೇಕು. ಪರರ ಉಪಕಾರಕ್ಕಾಗಿ ಬದುಕಿ, ಸ್ವಾರ್ಥವನ್ನು ಬಿಟ್ಟು ಜೀವನ ಮಾಡುವುದನ್ನು ಕಲಿಯಬೇಕು ಎಂದರು.

ಭವಿಷ್ಯದಲ್ಲಿ ಉಜ್ವಲವಾಗಿ ಬೆಳೆಯಬೇಕಿದ್ದ ಯತೀಶ್ವರ ಶ್ರೀಗಳು ಆಗಲಿದ್ದು, ನೋವುಂಟು ಮಾಡಿದೆ. ಹರಿಯುವ ನೀರು ಎಷ್ಟು ಪರಿಶುದ್ಧವೋ, ಹಾಗೇ ಚಲಿಸುವಂತಹ ಜಂಗಮ ಪವಿತ್ರಾತ್ಮಕವಾಗಿದ್ದು, ನಮ್ಮ ಧರ್ಮ ಭಕ್ತಿಯು ಸಂಸ್ಕಾರ ಉಳ್ಳವರ ಹತ್ತಿರವಿದೆ. ಮಹಾತ್ಮರು ನಡೆದ ದಾರಿಯಲ್ಲಿ ಸನ್ಮಾರ್ಗದಲ್ಲಿ ನಡೆಯಬೇಕಾಗಿದ್ದು, ಪ್ರತಿಯೊಬ್ಬರೂ ಧರ್ಮಾಚರಣೆ, ಮಠ-ಮಂದಿರಗಳಲ್ಲಿ ನೆಮ್ಮದಿ ಕಾಣಬೇಕಾಗಿದೆ ಎಂದು ಸಾನ್ನಿಧ್ಯವಹಿಸಿದ್ದ ಶಿವಗಂಗೇ ಕ್ಷೇತ್ರದ ಡಾ.ಮಲಯ ಶಾಂತಮುನಿ ಸ್ವಾಮೀಜಿ ತಿಳಿಸಿದರು.

ಬಿ.ಮಂಜಮ್ಮ ಜೋಗತಿಗೆ ಮರುಳಸಿದ್ದ ಶ್ರೀ ಪ್ರಶಸ್ತಿ : ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ ಮಾತಾ ಬಿ.ಮಂಜಮ್ಮ ಜೋಗತಿ ಅವರಿಗೆ ಕುಪ್ಪೂರು ಮರುಳಸಿದ್ದ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀಮಠದಿಂದ ಧರ್ಮ ರತ್ನಾಕರ ಪ್ರಶಸ್ತಿಯನ್ನು ಆಧ್ಯಾತ್ಮಕ ಚಿಂತಕ ವಿದ್ವಾನ್ ಕೆ.ಪಿ.ರತ್ನಾಕರ ಭಟ್ಟ ಅವರಿಗೆ ನೀಡಲಾಯಿತು. ಡಾ.ಲಕ್ಷ್ಮೀಶ್ರೀನಿವಾಸಗುರೂಜಿ, ಡಾ.ದಯಾನಂದ್, ಕೆ.ಎಂ.ಚನ್ನಬಸಪ್ಪ ಅವರಿಗೆ ಗುರುದೀಕ್ಷೆ ನೀಡಲಾಯಿತು.ಕೋಡಿಮಠದ ಡಾ.ಶಿವಾನಂದ ಶಿವಯೋಗಿ, ರಾಜೇಂದ್ರ ಸ್ವಾಮೀಜಿ, ನೂತನ ಮರಿಸ್ವಾಮಿ ತೇಜಸ್‌ಮರಿದೇವರು, ಹೊನ್ನವಳ್ಳಿ ಮಠದ ಶ್ರೀಶಿವಪ್ರಕಾಶ ಶಿವಚಾರ್ಯಸ್ವಾಮೀಜಿ, ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿ ಜಿ.ಎಸ್.ಬಸವರಾಜು, ತಹಸೀಲ್ದಾರ್ ತೇಜಸ್ವೀನಿ, ಶ್ರೀಮಠದ ಆಡಳಿತಾಧಿಕಾರಿ ವಾಗೀಶ್ ಇತರರು ಇದ್ದರು.

ಕರ್ತವ್ಯದಲ್ಲಿ ದೇವರನ್ನು ಕಾಣಬೇಕೆಂದು ನಂಬಿದ್ದು, ಜಾನಪದ ಕಲೆಗಳಲ್ಲಿ ಆಸಕ್ತಿ ಮೂಡಿಸಿಕೊಂಡು ಅವುಗಳನ್ನು ಉಳಿಸಲು ಪ್ರಯತ್ನಿಸುತ್ತಿದ್ದೇವೆ. ನನಗೆ ಜಾನಪದ ಕ್ಷೇತ್ರಕ್ಕೆ ಪದ್ಮಶ್ರೀ ನೀಡಿರುವುದು ಇದೇ ಪ್ರಥಮವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ನಮ್ಮಂಥವರನ್ನು ಕಡೆಯಾಗಿ ಕಾಣದೆ ವಿದ್ಯೆ ನೀಡುವುದರೊಂದಿಗೆ ಅವರನ್ನು ಪ್ರೀತಿ ವಿಶ್ವಾಸದಿಂದ ಕಾಣಬೇಕು. ಮಠ ಮಂದಿರಗಳಲ್ಲಿ ನಮ್ಮಂಥವರಿಗೆ ಸೇವೆ ಮಾಡಲು ಅವಕಾಶ ಕಲ್ಪಿಸಿ. ಮಾತಾ ಬಿ.ಮಂಜಮ್ಮ ಜೋಗತಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ