ಬಳ್ಳಾರಿ: ತಾಲೂಕಿನ ಶ್ರೀಕ್ಷೇತ್ರ ಚೇಳ್ಳಗುರ್ಕಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ನಾಲ್ಕು ದಿನಗಳ ಶ್ರೀ ಎರ‌್ರಿತಾತನವರ ಜೀವ ಸಮಾಧಿ ಶತಮಾನೋತ್ಸವ ಸಮಾರಂಭಕ್ಕೆ ಶನಿವಾರ ವಿಧ್ಯುಕ್ತ ಚಾಲನೆ ದೊರೆಯಿತು. ತಾಲೂಕಿನ ಶ್ರೀಕ್ಷೇತ್ರ ಚೇಳ್ಳಗುರ್ಕಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ನಾಲ್ಕು ದಿನಗಳ ಶ್ರೀ ಎರ‌್ರಿತಾತನವರ ಜೀವ ಸಮಾಧಿ ಶತಮಾನೋತ್ಸವ ಸಮಾರಂಭಕ್ಕೆ ಶನಿವಾರ ವಿಧ್ಯುಕ್ತ ಚಾಲನೆ ದೊರೆಯಿತು.
ನಾಡಿನ ವಿವಿಧ ಮಠಾಧೀಶರು, ವೀರಶೈವ ಸಮಾಜದ ಹಿರಿಯ ಗಣ್ಯರು ಸೇರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ತಾತನವರ ಶತಮಾನೋತ್ಸವ ಸಂಭ್ರಮ ಮೇಳೈಸಿತ್ತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಎನ್.ತಿಪ್ಪಣ್ಣ, ಮಹಾಮಹಿಮ ಶ್ರೀಎರ‌್ರಿತಾತನರು ಸಾಮಾನ್ಯ ವ್ಯಕ್ತಿಯಲ್ಲ. ತಪೋಶಕ್ತಿಯ ಸಿದ್ಧಿ ಪಡೆದಿದ್ದ ಮೌನ ಯೋಗಿಗಳಾಗಿದ್ದರು. ತಮ್ಮ ಆಧ್ಯಾತ್ಮಿಕ ತಪಃ ಶಕ್ತಿಯನ್ನು ಸಮಾಜದ ಒಳಿತಿಗೆ ಉಪಯೋಗಿಸಿದರು. ಸದಾ ಧ್ಯಾನಾಸಕ್ತ ಸ್ಥಿತಿಯಲ್ಲಿರುತ್ತಿದ್ದ ತಾತನವರು ಭಕ್ತರ ಉದ್ಧಾರಕ್ಕಾಗಿಯೇ ಧರೆಗಿಳಿದು ಬಂದ ಪವಿತಾತ್ಮರು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಆರ್.ರಾಮನಗೌಡ ಮಾತನಾಡಿ, ಅವಧೂತ ಪರಂಪರೆಗೆ ಸೇರಿದ ಶ್ರೀಎರ‌್ರಿತಾತನವರ ಪಾದಸ್ಪರ್ಶದಿಂದ ಚೇಳ್ಳಗುರ್ಕಿ ಗ್ರಾಮ ಧಾರ್ಮಿಕ ಕೇಂದ್ರವಾಗಿ ಸೆಳೆಯುತ್ತಿದೆ. ಕರ್ನಾಟಕ, ಆಂಧ್ರ ಸೇರಿ ವಿವಿಧ ರಾಜ್ಯಗಳ ಲಕ್ಷಾಂತರ ಭಕ್ತರು ಮಠಕ್ಕೆ ಆಗಮಿಸುತ್ತಿದ್ದು, ಪವಿತ್ರ ಸ್ಥಳವಾಗಿ ಬದಲಾಗಿದೆ ಎಂದರು.
ಸಂಡೂರು ವಿರಕ್ತಮಠದ ಶ್ರೀ ಪ್ರಭುಸ್ವಾಮೀಜಿ ಮಾತನಾಡಿ, ಮಠ ಮಾನ್ಯಗಳು ಬೌದ್ಧಿಕ ಕೇಂದ್ರಗಳಾಗಿ ಬೆಳೆಯಬೇಕು. ವಿಪರ್ಯಾಸ ಎಂದರೆ ಮಠಗಳು ಭೌತಿಕವಾಗಿ ಮಾತ್ರ ಬೆಳೆಯುತ್ತಿವೆ. ಮಠದ ಮೂಲ ಆಶಯಗಳು ಮರೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಚೇಳ್ಳಗುರ್ಕಿಯ ಶ್ರೀ ಎರ‌್ರಿತಾತನವರ ಮಠ ಧಾರ್ಮಿಕ ಶ್ರದ್ಧಾಕೇಂದ್ರವಾಗಿ ಭಕ್ತರ ಇಚ್ಛೆಯಂತೆ ಕಾರ್ಯೋನ್ಮುಖವಾಗಿದೆ ಎಂದರು. ಈ ಭಾಗದ ದೊಡ್ಡ ಕವಿಗಳಾದ ಜೋಳದರಾಶಿ ದೊಡ್ಡನಗೌಡರ ಹೆಸರು ಚಿರಸ್ಥಾಯಿಗೊಳಿಸುವ ಕೆಲಸವಾಗಬೇಕು. ಬಿಸಿಲೂರು ಎಂಬ ಹಣೆಪಟ್ಟಿ ಹೊತ್ತಿರುವ ಈ ಜಿಲ್ಲೆ ಮಲೆನಾಡಿನಂತೆ ಬದಲಾಗಬೇಕು. ಪ್ರತಿಯೊಬ್ಬರೂ ಪರಿಸರ ರಕ್ಷಣೆಯ ಕಡೆ ಗಮನ ನೀಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಆಂಧ್ರಪ್ರದೇಶದ ಉರವಕೊಂಡ ಉರಗಾದ್ರಿ ಗವಿಮಠ ಸಂಸ್ಥಾನದ ಡಾ.ಕರಿಬಸವ ರಾಜೇಂದ್ರಸ್ವಾಮೀಜಿ ಮಾತನಾಡಿ, ಎರ‌್ರಿತಾತನವರು ತತ್ವ ಸಾಧನೆಯ ನಿಜ ಸಿದ್ಧಿಯ ಮರ್ಮವನ್ನರಿತವರು. ಸದಾ ಧ್ಯಾನದಲ್ಲಿ ಲೀನವಾಗಿರುತ್ತಿದ್ದ ತಾತನವರು, ತಮ್ಮ ಬಳಿ ಬರುತ್ತಿದ್ದ ಭಕ್ತರ ಸಂಕಷ್ಟಗಳಿಗೆ ಸೂಕ್ತ ಸಲಹೆಗಳನ್ನು ನೀಡಿ ಪರಿಹಾರ ಮಾಡುತ್ತಿದ್ದರಲ್ಲದೆ, ಹಲವು ಪವಾಡಗಳ ಮೂಲಕ ಜನರ ಸಂಕಷ್ಟಗಳನ್ನು ನಿವಾರಿಸುತ್ತಿದ್ದರು. ಎರ‌್ರಿತಾತನವರ ಕೃಪಾಶೀರ್ವಾದದಿಂದ ಚೇಳ್ಳಗುರ್ಕಿ ಗ್ರಾಮ ಇಂದು ಯಾತ್ರಾ ಸ್ಥಳವಾಗಿ ಬದಲಾಗಿದೆ. ಶ್ರೀಗಳ ಜೀವ ಸಮಾಧಿಯ ದರ್ಶನ ಪಡೆಯಲು ನಿತ್ಯ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಪುನೀತರಾಗುತ್ತಿದ್ದಾರೆ ಎಂದರು.
ಆಂಧ್ರಪ್ರದೇಶದ ಪಾಲ್ತೂರು ಕಲ್ಲುಹೊಳೆಮಠದ ತಪೋರತ್ನ ಶ್ರೀಚೆನ್ನವೀರ ಶಿವಾಚಾರ್ಯ ಸ್ವಾಮೀಜಿ, ಕಮ್ಮರಚೇಡು ಸಂಸ್ಥಾನಮಠದ ಶ್ರೀ ಕಲ್ಯಾಣಸ್ವಾಮೀಜಿ ಹಾಗೂ ವೀ.ವಿ. ಸಂಘದ ನಿಕಟಪೂರ್ವ ಅಧ್ಯಕ್ಷ ಉಡೇದ ಬಸವರಾಜ ಮಾತನಾಡಿದರು.
ಶ್ರೀ ಎರ‌್ರಿಸ್ವಾಮಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಎಚ್.ಬಾಳನಗೌಡ ಹಾಗೂ ಶ್ರೀ ಎರ‌್ರಿಸ್ವಾಮಿ ದಾಸೋಹ ಸೇವಾ ಸಂಘದ ಅಧ್ಯಕ್ಷ ಸಿ.ಕೆ.ಪೊಂಪನಗೌಡ ಅಧ್ಯಕ್ಷತೆ ವಹಿಸಿದ್ದರು. ವೀ.ವಿ. ಸಂಘದ ಸಹ ಕಾರ್ಯದರ್ಶಿ ದರೂರು ಶಾಂತನಗೌಡ, ಹಿರಿಯ ವಕೀಲ ಎನ್.ಅಯ್ಯಪ್ಪ ಇದ್ದರು.
ಶ್ರೀ ಎರ‌್ರಿತಾತನವರ ಪವಾಡಗಳ ಕುರಿತಾದ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಲಾಯಿತು. ತಾಲೂಕಿನ ವಿವಿಧ ಗ್ರಾಮಗಳ 28 ಸಪ್ತಭಜನೆ ತಂಡಗಳ ಮುಖ್ಯಸ್ಥರು ಹಾಗೂ ಹಿರಿಯ ಪತ್ರಕರ್ತ ಸಿ.ಜಿ.ಹಂಪಣ್ಣನವರನ್ನು ಸನ್ಮಾನಿಸಲಾಯಿತು. ಮಸೀದಿಪುರ ಸಿದ್ಧರಾಮನಗೌಡ ಪ್ರಾಸ್ತಾವಿಕ ಮಾತನಾಡಿದರು.
ಎಚ್.ಎಂ.ಉಮಾ ಹಾಗೂ ಎಂ.ವಿನೋದ್ ಕಾರ್ಯಕ್ರಮ ನಿರ್ವಹಿಸಿದರು. ದೊಡ್ಡ ಬಸವ ಗವಾಯಿ ಡಿ.ಕಗ್ಗಲ್ ಮತ್ತು ತಂಡದಿಂದ ವಚನ ಗಾಯನ ಜರುಗಿತು. ಶತಮಾನೋತ್ಸವ ಸಮಾರಂಭ ಹಿನ್ನೆಲೆಯಲ್ಲಿ ಶ್ರೀಎರ‌್ರಿತಾತನವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಮಠವನ್ನು ವಿವಿಧ ಪುಷ್ಪ-ಪತ್ರೆಗಳಿಂದ ಅಲಂಕೃತಗೊಳಿಸಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ.