ಜಿಲ್ಲೆ

ಜಿಂದಾಲ್‌ಗೆ ಕರೊನಾ ಕಂಟಕ, ಒಂದೇ ದಿನ 46 ಪ್ರಕರಣಗಳು ಪತ್ತೆ

ಬಳ್ಳಾರಿ: ಸಂಡೂರು ತಾಲೂಕಿನ ತೋರಣಗಲ್ ಗ್ರಾಮದಲ್ಲಿರುವ ಜಿಂದಾಲ್ ಕಾರ್ಖಾನೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಕೇವಲ ಎಂಟು ದಿನಗಳಲ್ಲಿ ಜಿಂದಾಲ್ ನೌಕರರು ಹಾಗೂ ಅವರ ಸಂಪರ್ಕಿತ 80 ಜನರಿಗೆ ಕರೊನಾ ಸೋಂಕು ತಗುಲಿದೆ.

ತಮಿಳುನಾಡು ಮೂಲದ ನೌಕರನಿಗೆ ಜೂ.3ರಂದು ಕರೊನಾ ದೃಢಪಟ್ಟಿತ್ತು. ಜೂ.4ರಂದು ಆಂಧ್ರಪ್ರದೇಶ ಮೂಲದ ನೌಕರನಿಗೆ ಸೋಂಕು ಹರಡಿತ್ತು. ಮಂಗಳವಾರದ ವೇಳೆಗೆ ಸೋಂಕಿತರ ಸಂಖ್ಯೆ 14ಕ್ಕೆ ಏರಿತ್ತು. ಬುಧವಾರ 20 ಜನರಿಗೆ ಸೋಂಕು ತಗುಲಿತ್ತು. ಗುರುವಾರ 46 ಹೊಸ ಪ್ರಕರಣಗಳು ದಾಖಲಾಗಿವೆ. ಜಿಂದಾಲ್ ಕಾರ್ಖಾನೆಯಲ್ಲಿ ಸುಮಾರು 35 ಸಾವಿರ ಜನರು ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಸೋಂಕಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಆತಂಕ ವ್ಯಕ್ತವಾಗುತ್ತಿದೆ. ಜಿಂದಾಲ್ ನೌಕರರು ಬಳ್ಳಾರಿ, ಸಂಡೂರು, ಹೊಸಪೇಟೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ವಾಸವಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲೂ ಕರೊನಾ ಹರಡುವಿಕೆ ಹೆಚ್ಚಾಗುವ ಭೀತಿ ಎದುರಾಗಿದೆ.

ಮಂಗಳವಾರದವರೆಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 68 ಇತ್ತು. ಎರಡೇ ದಿನಗಳಲ್ಲಿ ಸೋಂಕಿತರ ಸಂಖ್ಯೆ 147ಕ್ಕೆ ಏರಿಕೆಯಾಗಿದೆ. ಈ ಪೈಕಿ ಅರ್ಧಕ್ಕಿಂತ ಹೆಚ್ಚಿನ ಪ್ರಕರಣಗಳು ಜಿಂದಾಲ್ ಕಾರ್ಖಾನೆಗೆ ಸಂಬಂಧಿಸಿದ್ದು ಎಂಬುದು ಗಮನಾರ್ಹವಾಗಿದೆ.