ಅಥಣಿ: ಕಳೆದ 2 ತಿಂಗಳಿಂದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಒಂದೇ ಒಂದು ಕರೊನಾ ವೈರಸ್ ದೃಢ ಪ್ರಕರಣ ಪತ್ತೆಯಾಗಿರಲಿಲ್ಲ. ಆದರೆ, ಮಂಗಳವಾರ ಒಂದೇ ದಿನ ತಾಲೂಕಿನ 12 ಜನರಿಗೆ ಮಹಮಾರಿ ಕರೊನಾ ವೈರಸ್ ದೃಢಪಟ್ಟಿದ್ದು, ತಾಲೂಕಿನ ಜನರಲ್ಲಿ ಆತಂಕ ಮನೆ ಮಾಡಿದೆ.
ಸೋಂಕಿತರೆಲ್ಲರನ್ನೂ ತಾಲೂಕಿನ ನಂದಗಾಂವ ಗ್ರಾಮದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇಲ್ಲಿ ಒಟ್ಟು 45 ಜನರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿತ್ತು. ಇವರಲ್ಲಿ ಈಗ 13 ಜನರಿಗೆ ವೈರಸ್ ಪತ್ತೆಯಾಗಿದೆ. ಅಥಣಿ ತಾಲೂಕಿನಿಂದ ಜಾರ್ಖಂಡ್‌ನ ಶಿಖರ್ಜಿಯ ಧಾರ್ಮಿಕ ಯಾತ್ರೆಗೆ ತೆರಳಿ ಮೇ 6ರಂದು ಬಸ್ ಮೂಲಕ ಮರಳಿ ಬಂದ 45 ಜನರನ್ನು ನಿಪ್ಪಾಣಿ ಬಳಿಯ ಕೊಗನೊಳ್ಳಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಗೊಳಪಡಿಸಲಾಗಿತ್ತು. ಬಳಿಕ ನಂದಗಾಂವ ಗ್ರಾಮದ ಇನ್‌ಸ್ಟಿಟ್ಯೂಷನಲ್ ಕ್ವಾರಂಟೈನ್‌ನಲ್ಲಿಡಲಾಗಿತ್ತು. 45 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿತ್ತು. ಇವರಲ್ಲಿ 13 ಜನರಿಗೆ ಕರೊನಾ ದೃಢಪಟ್ಟಿದೆ. ಸೋಂಕಿತರನ್ನು ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ. 13 ಜನರಿಗೆ ಸೋಂಕು ತಗುಲಿದವರಲ್ಲಿ ತಾಲೂಕಿನ ಸವದಿ ಗ್ರಾಮದ 8, ನಂದಗಾಂವ ಗ್ರಾಮದ 3, ಝುಂಜುರವಾಡ ಗ್ರಾಮದ ಒಬ್ಬರು ಹಾಗೂ ಹುಕ್ಕೇರಿ ತಾಲೂಕಿನ ಬೆಳ್ಳವಕ್ಕಿ ಗ್ರಾಮದ ಒಬ್ಬರು ಸೇರಿದ್ದಾರೆ.
ಜಾರ್ಖಂಡನ ಶಿಖರ್ಜಿಯ ಧಾರ್ಮಿಕ ಯಾತ್ರೆಗೆ ಹೋಗಿದ್ದ ತಾಲೂಕಿನ 45 ಜನರನ್ನು ಕಳೆದ 14 ದಿನಗಳಿಂದ ನಂದಗಾಂವ ಗ್ರಾಮದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. 14 ದಿನಗಳ ಕ್ವಾರಂಟೈನ್ ಅವಧಿ ಮುಗಿದ ಮೇಲೆ ಅವರ ಗಂಟಲು ದ್ರವದ ಮಾದರಿ ವರದಿ ಬರುವ ಮುನ್ನವೇ 20ಕ್ಕೂ ಹೆಚ್ಚು ಜನರನ್ನು ಬಿಡುಗಡೆ ಮಾಡಿ ಅವರ ಮನೆಗಳಿಗೆ ಕಳುಹಿಸಲಾಗಿತ್ತು. ಇನ್ನು ಈ 20ಕ್ಕೂ ಹೆಚ್ಚು ಜನರು ಯಾವ ಯಾವ ಜನರೊಂದಿಗೆ ಸಂಪರ್ಕ ಮಾಡಿದ್ದಾರೆ ಹಾಗೂ ಯಾವ ಯಾವ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ ಎನ್ನುವ ವಿಷಯ ಆತಂಕ ಸೃಷ್ಟಿಸಿದೆ. ಪರೀಕ್ಷೆ ವರದಿ ಬರುವ ಮುನ್ನವೇ ಇವರನ್ನು ತಾಲೂಕಾಡಳಿತ ಮನೆಗೆ ಕಳುಹಿಸಿದ್ದೇಕೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಮಂಗಳವಾರ ಬಂದ ವರದಿಯಲ್ಲಿ 13 ಜನರಲ್ಲಿ ಕರೊನಾ ಸೋಂಕು ತಗುಲಿರುವುದು ಕಂಡು ಬಂದಿದೆ. 13 ಜನರನ್ನು ಬೆಳಗಾವಿಯ ನಿಗದಿತ ಕರೊನಾ ಆಸ್ಪತ್ರೆಗೆ ರವಾನಿಸಲಾಗಿದೆ. 13 ಜನರ ನೇರ ಸಂಪರ್ಕದಲ್ಲಿದ್ದವರು ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಸದ್ಯ ಕ್ವಾರಂಟೈನ್ ಮಾಡಲಾಗುತ್ತಿದೆ. ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ.| ದುಂಡಪ್ಪ ಕೋಮಾರ ತಹಸೀಲ್ದಾರ್, ಅಥಣಿ