ಭದ್ರಾವತಿ ಗ್ರಾಮಾಂತರ ಠಾಣೆ 
ಜಿಲ್ಲೆ

ಮಾಟ, ಮಂತ್ರ, ಶಾಸ್ತ್ರ ಎಂದು ನಂಬಿಸಿ ಚಿನ್ನಾಭರಣ ಕಳವು

ಶಿವಮೊಗ್ಗ: ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಮತ್ತು ಅತ್ತಿಗುಂದ ಗ್ರಾಮದಲ್ಲಿ ಮಾಟ, ಮಂತ್ರ, ಶಾಸ್ತ್ರ ಎಂದು ನಂಬಿಸಿ ಇಬ್ಬರಿಗೆ ವಂಚಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.

ಶ್ರೀನಿವಾಸ್ ಎಂಬಾತ ನಾನಾ ಕಾರಣ ತಿಳಿಸಿ ಪೂಜೆ ಮಾಡುವುದಾಗಿ ನಂಬಿಸಿ ಇಬ್ಬರಿಗೂ ವಂಚನೆ ಮಾಡಿದ್ದು ಈ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಕೂಡ್ಲಿಗೆರೆಯ ಕೃಷಿಕರೊಬ್ಬರ ಮಗನಿಗೆ ಸರಿಯಾಗಿ ಮಾತು ಬರುತ್ತಿರಲಿಲ್ಲ. ಅದಕ್ಕೆ ಮಾಟವೇ ಕಾರಣವೆಂದು ಶ್ರೀನಿವಾಸ ನಂಬಿಸಿದ್ದ. ಕೃಷಿಕನ ಮನೆಯ ಹಾಲ್‌ನಲ್ಲಿ ಅಗೆದಾಗ ತಾಮ್ರದ ಚೊಂಬು, ನಾಲ್ಕು ಕವಡೆ ಪತ್ತೆಯಾಗಿತ್ತು. ಇದರಲ್ಲೆ ಮಾಟ ಮಾಡಿದ್ದಾರೆಂದು ನಂಬಿಸಿ ಜು.23ರಂದು ದೇವಿಗೆ ಪೂಜೆ ಆರಂಭಿಸಿದ್ದ. ಪೂಜಾ ಸಾಮಗ್ರಿಗಾಗಿ 2.25 ಲಕ್ಷ ರೂ. ಹಣ ಪಡೆದಿದ್ದ.

ಪೂಜೆ ಸಂದರ್ಭ ಮನೆಯರ ಬಳಿ ಇದ್ದ ಚಿನ್ನಾಭರಣವನ್ನೆಲ್ಲ ತರಿಸಿ ಎಲ್ಲರ ಎದುರಲ್ಲಿಯೇ ತಾನೇ ತರಿಸಿದ್ದ ಒಂದು ಬಾಕ್ಸ್‌ಗೆ ಹಾಕಿ ಪೂಜೆ ಮಾಡಿದ್ದ. ಬಾಕ್ಸ್‌ಗೆ ಬೀಗ ಹಾಕಿ ಅದನ್ನು ಕೊಠಡಿಯಲ್ಲಿಟ್ಟು ಪೂಜಿಸಬೇಕು. ಆ ಸಂದರ್ಭ ಯಾರೂ ಒಳ ಬರುವಂತಿಲ್ಲ ಎಂದು ಸೂಚಿಸಿದ್ದ. ಪೂಜೆ ಮುಗಿಸಿ ತೆರಳುವಾಗ, ಈ ಬಾಕ್ಸ್‌ಗೆ 48 ದಿನ ಪೂಜೆ ನಡೆಯಬೇಕು ಎಂದು ತಿಳಿಸಿದ್ದ.

ಮತ್ತೊಂದು ಪ್ರಕರಣದಲ್ಲಿ ಅತ್ತಿಗುಂದ ಗ್ರಾಮದ ಯುವಕನ ಮನೆಗೆ ತೆರಳಿದ್ದ ಅದೇ ಶ್ರೀನಿವಾಸ್, ಮಾಟ ಮಾಡಿರುವುದರಿಂದ ನಿಮಗೆ ಸಮಸ್ಯೆಯಾಗುತ್ತಿದೆ. ದೇವಿಗೆ ಪೂಜೆ ಮಾಡುತ್ತೇನೆಂದು ನಂಬಿಸಿದ್ದ. ಪೂಜಾ ಸಾಮಗ್ರಿಗೆ 1.50 ಲಕ್ಷ ರೂ. ಹಣ ಪಡೆದಿದ್ದ. ಪೂಜೆ ದಿನ ಚಿನ್ನಾಭರಣವನ್ನೆಲ್ಲ ಬಾಕ್ಸ್‌ಗೆ ಹಾಕಿ ಅವರದ್ದೇ ಮನೆಯ ಕೊಠಡಿಯಲ್ಲಿ ಇಟ್ಟು ಏಕಾಂತವಾಗಿ ಪೂಜೆ ಸಲ್ಲಿಸಿದ್ದ. 41 ದಿನ ನಿರಂತರ ಪೂಜೆ ಮಾಡುವಂತೆ ಸೂಚಿಸಿ ತೆರಳಿದ್ದ.

ಎರಡು ಮನೆಗಳಲ್ಲಿ ಯಾರೂ ಬಾಕ್ಸ್ ಬೀಗ ತೆಗೆಯಬಾರದೆಂದು ಎಚ್ಚರಿಕೆ ನೀಡಿದ್ದ. ಬೀಗ ತೆಗೆದವರು ಸಾಯುತ್ತಾರೆಂದು ಬೆದರಿಸಿದ್ದ. ಆತ ಸೂಚಿಸಿದಂತೆ ನಿತ್ಯ ಪೂಜೆ ಮಾಡಿದ್ದರು. 48 ದಿನದ ಬಳಿಕ ಕರೆ ಮಾಡಿದಾಗ ಶ್ರೀನಿವಾಸನ ಫೋನ್ ಮಾಡಿದಾಗ ಸ್ವಿಚ್ ಆಫ್ ಬಂದಿತ್ತು. ಅನುಮಾನಗೊಂಡು ಬಾಕ್ಸ್ ತೆರೆದಾಗ ಚಿನ್ನಾಭರಣ ನಾಪತ್ತೆಯಾಗಿದ್ದವು.

ಕೂಡ್ಲಿಗೆರೆಯ ಕೃಷಿಕನ ಮನೆಯಲ್ಲಿ 23.10 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2.25 ಲಕ್ಷ ರೂ. ನಗದು, ಅತ್ತಿಗುಂದದ ಯುವಕನ ಮನೆಯಲ್ಲಿ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 1.50 ಲಕ್ಷ ರೂ. ನಗದು ಕಳ್ಳತನ ಮಾಡಲಾಗಿದ್ದು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.