ಬೆಳಗಾವಿ: ಕಿತ್ತೂರು ತಾಲೂಕಿನ ದೇವರಶೀಗಿಹಳ್ಳಿ ಗ್ರಾಮದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಬಂಗಾರದ ಸರ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು ಶನಿವಾರ ಮೂವರನ್ನು ಬಂಧಿಸಿದ್ದು, 35 ಗ್ರಾಂ ಚಿನ್ನಾಭರಣ, ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.
ದೇವರಶೀಗಿಹಳ್ಳಿ ಗ್ರಾಮದ ನಾಗೇಶ ದೊಡ್ಡಮನಿ(24), ವಿಜಯ ಮದನಬಾವಿ(26), ಚೇತನ ಹಿರೇಮಠ (25) ಬಂಧಿತರು. ಸೆ.23ರಂದು ದೇವರಶೀಗಿಹಳ್ಳಿ ಗ್ರಾಮದ ರಾಮನಗೌಡ ಪಾಟೀಲ ಎಂಬುವರು ಹೊಲದಿಂದ ಮೇವಿನ ಹೊರೆ ಹೊತ್ತುಕೊಂಡು ಬರುವ ವೇಳೆ ಅವರ ಕೊರಳಲ್ಲಿದ್ದ 1.4 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದರು.
ಈ ಕುರಿತು ರಾಮನಗೌಡ ಅವರು ಕಿತ್ತೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಕಿತ್ತೂರು ಠಾಣೆ ಸಿಪಿಐ ಮಂಜುನಾಥ ಕುಸಗಲ್, ಪಿಎಸ್‌ಐ ಎಸ್.ಬಿ. ಮಾವಿನಕಟ್ಟಿ, ಎಸ್.ಬಿ.ಬಡಿಗೇರ ತಂಡ ತನಿಖೆ ಕೈಗೊಂಡಿತ್ತು.