ಬೆಳಗಾವಿ: ಕರೊನಾ ಸೋಂಕು ನಿಯಂತ್ರಣಕ್ಕಾಗಿ ದೇಶದಲ್ಲಿ ಜಾರಿಯಾದ ಲಾಕ್‌ಡೌನ್‌ನಿಂದ ಎಲ್ಲ ಕ್ಷೇತ್ರಗಳೂ ಸ್ತಬ್ಧವಾಗಿವೆ. ಆಭರಣ ತಯಾರಿಕೆ ಕ್ಷೇತ್ರವೂ ಇದರಿಂದ ಹೊರತಾಗಿಲ್ಲ. ಆದರೆ, ಆಭರಣ ತಯಾರಕನೊಬ್ಬ ಲಾಕ್‌ಡೌನ್ ಸಂದರ್ಭವನ್ನೇ ಅವಕಾಶವಾಗಿ ಬಳಸಿಕೊಂಡಿದ್ದಾರೆ.
ಕರೊನಾದಿಂದಾಗಿ ಮಾಸ್ಕ್ ಧಾರಣೆ ಕಡ್ಡಾಯವಾಗಿದ್ದರಿಂದ ಮಹಾರಾಷ್ಟ್ರದ ಕೊಲ್ಲಾಪುರದ ಆಭರಣ ತಯಾರಕ ಸಂದೀಪ ಸಾಂಗಾವಕರ್ ಎಂಬುವರು ಬೆಳ್ಳಿಯಿಂದ ಮಾಸ್ಕ್ ತಯಾರಿಸಿ ಗಮನ ಸೆಳೆದಿದ್ದಾರೆ. ಅಲ್ಲದೆ, ಇದರಿಂದಲೇ ಆದಾಯದ ಮಾರ್ಗ ಕಂಡುಕೊಂಡಿದ್ದು, ವೃತ್ತಿಯನ್ನೂ ಮುಂದುವರಿಸಿದ್ದಾರೆ.
2,500 ರೂ. ದರ : ಕರೊನಾ ಸೋಂಕು ತಡೆಗಟ್ಟಲು ಸರ್ಕಾರಿ ಮಾರ್ಗಸೂಚಿ ಅನುಸಾರ ಈಗ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ. ಹೀಗಾಗಿ ಬಟ್ಟೆಯಿಂದ ತಯಾರಿಸಿದ ಮಾಸ್ಕ್‌ಗೆ ಎಲ್ಲಿಲ್ಲದ ಬೇಡಿಕೆ ಇದೆ. ಸರಳವಾಗಿ ವಿವಾಹವಾಗುವ ಜೋಡಿ ಸಹ ಮಾಸ್ಕ್ ಧರಿಸದೇ ಹಸೆಮಣೆ ಏರುವಂತಿಲ್ಲ. ಇದನ್ನು ಮನಗಂಡ ಆಭರಣ ತಯಾರಕ ಸಂದೀಪ ಅವರು ಬೆಳ್ಳಿಯಲ್ಲಿ ಮಾಸ್ಕ್ ತಯಾರಿಸಿದ್ದಾರೆ. 50 ಗ್ರಾಂ ತೂಕದ ಈ ಮಾಸ್ಕ್‌ಗೆ 2,500 ರೂ. ದರ ನಿಗದಿಪಡಿಸಿದ್ದಾರೆ.
ಉಸಿರಾಟಕ್ಕೆ ತೊಂದರೆಯಾಗದಂತೆ ವಿನ್ಯಾಸ: ಕೇಂದ್ರ ಸರ್ಕಾರ 3ನೇ ಹಂತದ ವರೆಗೆ ಲಾಕ್‌ಡೌನ್ ೋಷಿಸಿದ ಬಳಿಕವಂತೂ ಆಭರಣ ಕ್ಷೇತ್ರ ಸಂಪೂರ್ಣ ಸ್ತಬ್ಧಗೊಂಡಿತು. ಒಂದು ರೂಪಾಯಿ ವ್ಯಾಪಾರವೂ ಇಲ್ಲದೆ ಎರಡು ತಿಂಗಳಿಂದ ಕಂಗೆಟ್ಟಿದ್ದೆವು. ಲಾಕ್‌ಡೌನ್ ಇದ್ದರೂ ಸರಳವಾಗಿ ವಿವಾಹ ನೆರವೇರುತ್ತಿದ್ದವು. ಹಾಗಾಗಿ, ವಧು-ವರನಿಗಾಗಿ ಬೆಳ್ಳಿಯಿಂದ ಆಕರ್ಷಕವಾದ ಮಾಸ್ಕ್ ತಯಾರಿಸಬಹುದೇ ಎನ್ನುವ ಆಲೋಚನೆ ಬಂತು.
ಕೂಡಲೇ ಮೂವರು ಕಾರ್ಮಿಕರೊಂದಿಗೆ ಮನಸ್ಸಿನಲ್ಲಿ ಮೂಡಿದ ಮಾಸ್ಕ್‌ನ ವಿನ್ಯಾಸದೊಂದಿಗೆ ಕೆಲಸ ಆರಂಭಿಸಿ ಯಶ ಕಂಡೆ. ಇದನ್ನು ಧರಿಸಿದಾಗ ಉಸಿರಾಟಕ್ಕೆ ತೊಂದರೆಯಾಗದಂತೆ ಸಿದ್ಧಪಡಿಸಲಾಗಿದೆ. ಈ ಮಾಸ್ಕ್‌ಗೆ ಈಗ ಬೇಡಿಕೆ ಬರುತ್ತಿದ್ದು, ವಾರದೊಳಗೆ ಗ್ರಾಹಕರು ಮೂರು ಜೋಡಿ ಮಾಸ್ಕ್ ಖರೀದಿಸಿದ್ದಾರೆ. ಮತ್ತೆ ಎರಡು ಜೋಡಿಯಿಂದ ಬೆಳ್ಳಿ ಮಾಸ್ಕ್‌ಗೆ ಬೇಡಿಕೆ ಬಂದಿದೆ ಎಂದು ಆಭರಣ ತಯಾರಕ ಸಂದೀಪ ಸಾಂಗಾವಕರ್ ‘ವಿಜಯವಾಣಿ’ಗೆ ತಿಳಿಸಿದರು.
3ನೇ ಹಂತದ ಲಾಕ್‌ಡೌನ್ ಸಡಿಲಿಕೆಯಾಗಿ ಅಂಗಡಿ ತೆರೆಯಲು ಸರ್ಕಾರ ಅವಕಾಶ ಕೊಟ್ಟರೂ, ಆಭರಣ ಖರೀದಿಗೆ ಗ್ರಾಹಕರು ಬರಲಿಲ್ಲ. ಹಾಗೆಂದು ಆಭರಣ ತಯಾರಕರು ಕೈಕಟ್ಟಿ ಕುಳಿತುಕೊಳ್ಳಬಾರದು. ಜನರ ಮನದಾಳ ಅರಿತು ನಾವೇ ವ್ಯಾಪಾರಕ್ಕೆ ಪೂರಕವಾದ ಅವಕಾಶ ಸೃಷ್ಟಿಸಿಕೊಳ್ಳಬೇಕು. ದೇಶದಲ್ಲಿಯೇ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕರೊನಾ ಸೋಂಕಿತರು ಇರುವುದರಿಂದ ನಾನು ನನ್ನ ವೃತ್ತಿಯನ್ನೇ ಸ್ವಲ್ಪ ಬದಲಿಸಿಕೊಂಡು ಬೆಳ್ಳಿಯಿಂದ ಮಾಸ್ಕ್ ತಯಾರಿಸುವ ಕಾರ್ಯ ಕೈಗೊಂಡೆ. | ಸಂದೀಪ ಸಾಂಗಾವಕರ್ ಬೆಳ್ಳಿ ಮಾಸ್ಕ್ ತಯಾರಕ
| ಇಮಾಮಹುಸೇನ್ ಗೂಡುನವರ