ಜಿಲ್ಲೆ

ಪೆರ್ಮುದೆಯಲ್ಲಿ ಚಿನ್ನಾಭರಣ, ನಗದು ಕಳವು

ಕಾಸರಗೋಡು: ಪೆರಿಯಡ್ಕ ಮಂಜೋಡಿ ನಿವಾಸಿ, ಗಲ್ಫ್ ಉದ್ಯೋಗಿ ಶರೀಫ್ ಅವರ ಪೆರ್ಮುದೆಯಲ್ಲಿರುವ ಮನೆ ಬಾಗಿಲು ಒಡೆದು ಒಂಬತ್ತೂಕಾಲು ಪವನ್ ಚಿನ್ನಾಭರಣ, 10 ಸಾವಿರ ರೂ. ಕಳವುಗೈಯಲಾಗಿದೆ. ಮನೆಯವರು ಸಂಬಂಧಿಕರಲ್ಲಿಗೆ ತೆರಳಿದ್ದ ಸಂದರ್ಭ ಮನೆ ಹಿಂಭಾಗದ ಕಬ್ಬಿಣದ ಸರಳು ತುಂಡರಿಸಿ ಬಾಗಿಲು ಒಡೆದು ನುಗ್ಗಿ ಕಪಾಟಿನಲ್ಲಿರಿಸಿದ್ದ ನಗ, ನಗದು ದೋಚಲಾಗಿದೆ. ಶರೀಫ್ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಮನೆಯಲ್ಲಿ ವಾಸಿಸುತ್ತಿದ್ದಾರೆ.

ಸಂಬಂಧಿಕರ ಮನೆಯಿಂದ ಭಾನುವಾರ ಸಂಜೆ ಮನೆಗೆ ವಾಪಸಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಪಾಟಿನಲ್ಲಿರಿಸಿದ್ದ ಸಾಮಗ್ರಿ ಚೆಲ್ಲಾಪಿಲ್ಲಿಗೊಳಿಸಲಾಗಿದೆ. ಮನೆ ಬಾಗಿಲು ಒಡೆಯಲು ಬಳಸಿದ್ದರೆನ್ನಲಾದ ಕಬ್ಬಿಣದ ಸಲಾಕೆಯೊಂದನ್ನು ಮನೆ ವಠಾರದಿಂದ ಪತ್ತೆ ಹಚ್ಚಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಅವರ ಪತ್ನಿ ರುಕ್ಸಾನಾ ನೀಡಿದ ದೂರಿನನ್ವಯ ಕುಂಬಳೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.