ಜಿಲ್ಲೆ

ರಾಜ್ಯ ರಾಜಧಾನಿಯಲ್ಲಿ ಷಟರ್ ಕತ್ತರಿಸಿ 1 ಕೆ.ಜಿ. ಚಿನ್ನ, 3 ಕಿಲೋ ಬೆಳ್ಳಿ ವಸ್ತು ದೋಚಿದ ಕಳ್ಳರು!

lakshmihegde

ಬೆಂಗಳೂರು: ಜ್ಯುವೆಲರಿ ಮಳಿಗೆಯ ರೋಲಿಂಗ್ ಷಟರ್ ಅನ್ನು ಗ್ಯಾಸ್ ಕಟರ್​ನಿಂದ ಕತ್ತರಿಸಿ ಕಳ್ಳರು 1 ಕೆಜಿ ಚಿನ್ನಾಭರಣ, 3 ಕೆಜಿ ಬೆಳ್ಳಿ ವಸ್ತುಗಳನ್ನು ದೋಚಿದ್ದಾರೆ.

ಶಿವಾನಂದ ವೃತ್ತದಲ್ಲಿನ ಗಜೇಂದ್ರಕುಮಾರ್ ಎಂಬುವರಿಗೆ ಸೇರಿದ ಚಿರಾಗ್ ಜ್ಯುವೆಲರಿ ಮಳಿಗೆಯಲ್ಲಿ ಭಾನುವಾರ ತಡರಾತ್ರಿ ಕೃತ್ಯ ನಡೆದಿದೆ. ಸೋಮವಾರ ಬೆಳಗಿನ ಜಾವ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳರು ಮೊದಲು ಅಂಗಡಿ ಮುಂಭಾಗ ಅಳವಡಿಸಿದ್ದ ಸಿಸಿ ಕ್ಯಾಮರಾ ಮತ್ತು ಸೆನ್ಸರ್ ವೈರ್ ಕತ್ತರಿಸಿದ್ದಾರೆ. ಆ ನಂತರ ಗ್ಯಾಸ್ ಕಟರ್​ನಲ್ಲಿ ಕಬ್ಬಿಣದ ಗ್ರೀಲ್ ಹಾಗೂ ರೋಲಿಂಗ್ ಷಟರ್ ಕತ್ತರಿಸಿ ಒಳನುಗ್ಗಿ ಕೈಗೆ ಸಿಕ್ಕ ಚಿನ್ನ ಮತ್ತು ವಜ್ರದ ಆಭರಣ ಹಾಗೂ ಬೆಳ್ಳಿ ವಸ್ತುಗಳನ್ನು ತುಂಬಿಕೊಂಡಿದ್ದಾರೆ. ಅಲ್ಲದೆ, ಅಂಗಡಿ ಮುಖ್ಯ ಲಾಕರ್ ಒಡೆಯಲು ಯತ್ನಿಸಿದ್ದಾರೆ. ಸೋಮವಾರ ಬೆಳಗ್ಗೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಬೆರಳಚ್ಚು ಮತ್ತು ಎಫ್​ಎಸ್​ಎಲ್ ತಜ್ಞರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಗ್ಯಾಸ್ ಕಟರ್ ಬಳಸಿರುವ ಕಾರಣ ಶಬ್ದ ಬಂದಿಲ್ಲ. 1 ಕೆಜಿ ಚಿನ್ನಾಭರಣ ಮತ್ತು 3 ಕೆಜಿ ಬೆಳ್ಳಿ ಆಭರಣ ಕಳವಾಗಿರುವ ಬಗ್ಗೆ ಮಾಲಿಕರು ಮಾಹಿತಿ ನೀಡಿದ್ದಾರೆ. 15 ವರ್ಷಗಳಿಂದ ಗಜೇಂದ್ರಕುಮಾರ್ ಚಿನ್ನದ ಅಂಗಡಿ ನಡೆಸುತ್ತಿದ್ದಾರೆ. ಬಿಲ್ ಬುಕ್ ಮತ್ತು ಆಭರಣ ಪರಿಶೀಲನೆ ನಡೆಸಿ ನಿಖರ ಮಾಹಿತಿ ನೀಡುವುದಾಗಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.