ಕೊಟ್ಟೂರಿನ ಜೆಸ್ಕಾಂ ವಸತಿ ಗೃಹಗಳ ಸುತ್ತ ಮುಳ್ಳುಕಂಟಿಗಳು ಬೆಳೆದಿರುವುದು. 
ಜಿಲ್ಲೆ

ಜೆಸ್ಕಾಂ ವಸತಿ ಗೃಹಗಳು ಶಿಥಿಲ

Kopala - Desk - Eraveni

ಕೊಟ್ಟೂರು: ಪಟ್ಟಣದ ಜೆಸ್ಕಾಂ ಕಚೇರಿ ಹಿಂಬದಿಯಲ್ಲಿರುವ ನೌಕರರ ಎಂಟು ವಸತಿ ಗೃಹಗಳು ನಿರ್ವಹಣೆ ಇಲ್ಲದೆ ಶಿಥಿಲಗೊಂಡಿದ್ದು, ಸುತ್ತಲೂ ಗಿಡಗಂಟಿಗಳು ಬೆಳೆದು ಕಾಡಿನಂತಾಗಿದೆ.

ಈ ವಸತಿ ಗೃಹಗಳಲ್ಲಿದ್ದ ಮೂವರು ಜೆಸ್ಕಾಂ ನೌಕರರು ಮನೆ ಖಾಲಿ ಮಾಡಿದ ಮೇಲೆ ಸಂಪೂರ್ಣ ಬೀಳುಬಿದ್ದಿದೆ. ಮೂರು ನಾಲ್ಕು ದಶಕಗಳಿಗೂ ಮುಂಚೆ ವಸತಿ ಗೃಹಗಳು ನಿರ್ಮಾಣವಾಗಿವೆ. ಆಗ ಕೇವಲ ಐದಾರು ಲೈನ್‌ಮ್ಯಾನ್ ಹಾಗೂ ಒಬ್ಬ ಇಂಜಿನಿಯರ್ ಇದ್ದರು.

ಈಗ ಜೆಸ್ಕಾಂ ಉಪ ವಿಭಾಗವಾಗಿದೆ. ಉಜ್ಜಿನಿ, ಕೊಟ್ಟೂರು ಪಟ್ಟಣ, ಗ್ರಾಮಾಂತರ ಸೇರಿ 30 ಲೈನ್‌ಮ್ಯಾನ್‌ಗಳಿದ್ದಾರೆ. ಒಬ್ಬ ಎಇಇ ಹಾಗೂ ಇಬ್ಬರು ಇಂಜಿನಿಯರ್ ಹಾಗೂ ಆಡಳಿತ ವಿಭಾಗದ ಸಿಬ್ಬಂದಿ ಸೇರಿದರೆ 40ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ.

ಕಿರಿಯ ಇಂಜಿನಿಯರ್ ವಸತಿಗೃಹವೇ ಉಪ ವಿಭಾಗದ ಕಚೇರಿಯಾಗಿ ಮಾರ್ಪಟ್ಟಿದೆ. ಆದ್ದರಿಂದ ಸಿಬ್ಬಂದಿ ಸಂಖ್ಯೆಗೆ ಅನುಗುಣವಾಗಿ ವಸತಿಗೃಹಗಳಿಲ್ಲ. ಇದ್ದ ಎಂಟು ವಸತಿ ಗೃಹಗಳು ಶಿಥಿಲಗೊಂಡು ನಿರುಪಯುಕ್ತವಾಗಿವೆ. ಇಲಾಖೆ ನಿಯಮದಂತೆ ನೌಕರರ ವೇತನದಲ್ಲಿ ಶೇ.8ರಂತೆ ವಸತಿ ಗೃಹ ಬಾಡಿಗೆ ಮುರಿಯಲಾಗುತ್ತಿತ್ತು.

ಬಾಡಿಗೆ ಮನೆಯಲ್ಲಿದ್ದರೆ ಇಲಾಖೆ ಶೇ.8 ಹಣ ನೀಡುತ್ತದೆ. ಈಗ ಸಿಬ್ಬಂದಿ ಸಂಖ್ಯೆ ಹೆಚ್ಚಾಗಿದ್ದು. ಅದಕ್ಕೆ ಅನುಗುಣವಾಗಿ ವಸತಿ ಗೃಹಗಳನ್ನು ಜೆಸ್ಕಾಂ ನಿರ್ಮಿಸಬಹುದು. ಶಿಥಿಲಗೊಂಡ ಕಟ್ಟಡ ತೆರವುಗೊಳಿಸಿದರೆ ವಸತಿ ಗೃಹ ನಿರ್ಮಿಸಲು ಸಾಕಷ್ಟು ಸ್ಥಳವಿದೆ ಎಂಬುದು ಸಿಬ್ಬಂದಿ ಅಭಿಪ್ರಾಯ.

ವಸತಿ ಗೃಹಗಳು ಸಂಪೂರ್ಣ ಶಿಥಿಲಗೊಂಡಿಲ್ಲ. ಆದ್ದರಿಂದ ತೆರವು ಮಾಡುವ ಅಗತ್ಯವಿಲ್ಲ. ರಿಪೇರಿ ಮಾಡಿಸಿ. ನೀರಿನ ವ್ಯವಸ್ಥೆ ಮಾಡಿ. ಅನುಭವ ಆಧಾರದ ಮೇಲೆ ನೌಕರರಿಗೆ ವಾಸ ಮಾಡಲು ನೀಡಲಾಗುವುದು. ನಾಗರಾಜ್ ಜೆಸ್ಕಾಂ ಎಇಇ, ಕೊಟ್ಟೂರು