ಬಳ್ಳಾರಿ: ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ನಿರ್ಮಾಣದ ಕುರಿತು ಬೆಳಗಾವಿಯ ಸುವರ್ಣಸೌಧದಲ್ಲಿ ಮಂಗಳವಾರ ಪ್ರತಿಧ್ವನಿಸಿತು. ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಮಾತನಾಡಿ, ರಾಹುಲ್‌ಗಾಂಧಿ ಅವರು ಚುನಾವಣೆ ಪ್ರಚಾರಕ್ಕೆ ಬಳ್ಳಾರಿಗೆ ಬಂದಾಗ ಜೀನ್ಸ್ ಉದ್ಯಮ ಉತ್ತೇಜನಕ್ಕಾಗಿ 5 ಸಾವಿರ ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದ ಮೊದಲ ಬಜೆಟ್‌ನಲ್ಲಿ ಅನುದಾನ ಒದಗಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಹಾಗಾಗಿ ಯಾವಾಗ ಜೀನ್ಸ್ ಪಾರ್ಕ್ ನಿರ್ಮಾಣ ಮಾಡುತ್ತಿರಾ? ಎಂದು ಪ್ರಶ್ನಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಜವಳಿ, ಕಬ್ಬು ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ಜೀನ್ಸ್ ಪಾರ್ಕ್‌ಗೆ ಐದು ಸಾವಿರ ಕೋಟಿ ರೂ. ನೀಡುವ ವಿಚಾರದ ಬಗ್ಗೆ ರಾಹುಲ್‌ಗಾಂಧಿ ಅವರು ನೀಡಿರುವ ಹೇಳಿಕೆ ನನಗೆ ಗೊತ್ತಿಲ್ಲ. ರಾಜಕಾರಣದ ವಿಚಾರಕ್ಕೆ ನಾನು ಉತ್ತರಿಸುವುದಿಲ್ಲ ಎಂದಿದ್ದಾರೆ.
ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆಗೆ ಆಲದಹಳ್ಳಿಯಲ್ಲಿರುವ ಸರ್ವೇ ನಂ. 122/ಎ ರಲ್ಲಿ 50 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಸಮಗ್ರ ಯೋಜನೆ ಸಿದ್ದಪಡಿಸಲು ಕೆಐಎಡಿಬಿಗೆ ಜವಾಬ್ದಾರಿ ನೀಡಲಾಗಿದೆ. ಕೆಐಎಡಿಬಿ ವರದಿ ಸಲ್ಲಿಸಿದ ನಂತರ ಘಟಕಗಳ ಆರಂಭಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲದೆ ಈ ಯೋಜನೆ ಜಾರಿಗಾಗಿ 80 ಸದಸ್ಯರ ಸ್ಪೆಷಲ್ ಪರ್ಪಸ್ ವೆಹಿಕಲ್ (ಎಸ್‌ಪಿವಿ) ರಚನೆ ಮಾಡಲಾಗಿದೆ. ಈ ಎಸ್‌ಪಿವಿ ಯೋಜನಾ ವರದಿಯನ್ನು (ಡಿಪಿಆರ್) ಸಿದ್ದಪಡಿಸಲು ಕೆಐಎಡಿಬಿ ಅವರ ಜೊತೆ ಪತ್ರ ವ್ಯವಹಾರ ನಡೆಸುತ್ತಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಮತ್ತೊಮ್ಮೆ ವೈ.ಎಂ.ಸತೀಶ್ ಮಾತನಾಡಿ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಜೀನ್ಸ್ ಘಟಕಗಳು ಹೊರಬಿಡುತ್ತಿರುವ ರಸಾಯನಿಕಯುಕ್ತ ನೀರಿನಿಂದಾಗಿ ಅಂತರ್ಜಲ ಕಲುಷಿತಗೊಳ್ಳುತ್ತಿದೆ. ಅಲ್ಲದೆ ಆ ನೀರು ಜಲಚರಗಳ ಜೀವರಾಶಿಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸರ್ಕಾರ ತುರ್ತಾಗಿ ಎಫಿಲೆಂಟ್ (ವಾಟರ್ ಟ್ರೀಟ್‌ಮೆಂಟ್‌ಪ್ಲಾಂಟ್) ಅಳವಡಿಸಬೇಕು ಎಂದು ಆಗ್ರಹಿಸಿದರು.