ಬಾಳೆಹೊನ್ನೂರಿನ ಜೇಸಿ ವೃತ್ತದಲ್ಲಿ ಕಾಂಗ್ರೆಸ್‌ನಿಂದ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷೆ ಬಿ.ಸಿ.ಗೀತಾ ಮಾತನಾಡಿದರು. ನಟರಾಜ್, ಹನೀಫ್, ಸಂತೋಷ್, ಜಯಪ್ರಕಾಶ್, ಆದಿಲ್, ಅರುಣೇಶ್, ಹೇಮಲತಾ ಇತರರಿದ್ದರು. 
ಜಿಲ್ಲೆ

ವಿಪಕ್ಷಗಳಿಂದ ಹೊಟ್ಟೆಕಿಚ್ಚಿನ ರಾಜಕಾರಣ

ಬಾಳೆಹೊನ್ನೂರು: ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ನಾಯಕರು ಸಿಎಂ ಸಿದ್ದರಾಮಯ್ಯ ವಿರುದ್ಧ ಹೊಟ್ಟೆಕಿಚ್ಚಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಎಂಎಡಿಬಿ ಮಾಜಿ ಅಧ್ಯಕ್ಷೆ ಬಿ.ಸಿ.ಗೀತಾ ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್‌ನಿಂದ ಮಂಗಳವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಲವತ್ತು ವರ್ಷಗಳಿಂದ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲದ ಸಿದ್ದರಾಮಯ್ಯ ಅವರ ಆಡಳಿತ ವೈಖರಿ, ಏಳಿಗೆ ಸಹಿಸದೆ ವಿಪಕ್ಷಗಳ ನಾಯಕರು ಅವರ ವಿರುದ್ಧ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯಪಾಲರು ವಿಪಕ್ಷಗಳ ಕೈಗೊಂಬೆಯಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಅವರ ಘನತೆಗೆ ಧಕ್ಕೆ ತಂದಿದೆ. ಕಾಂಗ್ರೆಸ್ ಏಳಿಗೆಯನ್ನು ಕಂಡ ವಿಪಕ್ಷಗಳಿಗೆ ನಡುಕ ಹುಟ್ಟಿದ್ದು, ಪಕ್ಷವನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿವೆ. ಇದೀಗ ಪಕ್ಷದಲ್ಲಿ ಒಗ್ಗಟ್ಟಿನ ಪ್ರದರ್ಶನದ ಮೂಲಕ ಅವರಿಗೆ ತಕ್ಕ ಉತ್ತರ ನೀಡಬೇಕಿದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಜಾನ್ ಡಿಸೋಜಾ ಮಾತನಾಡಿ, ಬಿಜೆಪಿ ಭ್ರಷ್ಟಾಚಾರ, ಶೇ.40 ಕಮಿಷನ್ ದಂಧೆಯಿಂದ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಸೋಲಾಯಿತು. ಅದನ್ನು ಜೀರ್ಣಿಸಿಕೊಳ್ಳಲಾಗದೆ ಸಿದ್ದರಾಮಯ್ಯ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ವಿಪಕ್ಷಗಳ ಆರೋಪ ವಿಫಲವಾಗಲಿದೆ. ಇದಕ್ಕೆ ಕೋರ್ಟ್ ನೀಡಿರುವ ಆದೇಶ ಸಹ ಪೂರಕವಾಗಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಗೇರುಬೈಲ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್, ಮುಖಂಡರಾದ ಬಿ.ಸಿ.ಸಂತೋಷ್‌ಕುಮಾರ್, ಎಂ.ಎಸ್.ಜಯಪ್ರಕಾಶ್, ಇಫ್ತೆಖಾರ್ ಆದಿಲ್, ಸದಾಶಿವ ಆಚಾರ್ಯ, ರವಿಚಂದ್ರ, ಎಂ.ಎಸ್.ಅರುಣೇಶ್, ಹೇಮಲತಾ, ಶಶಿಕಲಾ, ಚಂದ್ರಮ್ಮ, ಇಬ್ರಾಹಿಂ ಶಾಫಿ, ಬಿ.ಕೆ.ಮಧುಸೂದನ್, ಮಹಮ್ಮದ್ ಜುಹೇಬ್, ಮಹೇಶ್ ಆಚಾರ್ಯ, ನವೀನ್ ಕರುವಾನೆ, ಶಿವಪ್ಪ ಇತರರಿದ್ದರು.