ಗಂಗಾವತಿ ಬನ್ನಿಗಿಡದ ಕ್ಯಾಂಪ್‌ನಲ್ಲಿ ಹೊಸದಾಗಿ ಆರಂಭಿಸಿರುವ ಜೆಡಿಎಸ್ ಗಂಗಾವತಿ ವಿಧಾನಸಭೆ ಕ್ಷೇತ್ರದ ಕಚೇರಿ ಉದ್ಘಾಟಿಸಿದ ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ರಾಜುನಾಯಕ ಭಾನುವಾರ ಮಾತನಾಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ, ತುಂಗಭದ್ರಾ ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಬಿಜೆಪಿ ಮುಖಂಡ ಎಚ್.ಸಂಗಮೇಶ, ಜೆಡಿಎಸ್ ಪಕ್ಷದ ಪದಾಧಿಕಾರಿಗಳಾದ ಮಲ್ಲನಗೌಡ, ವಿ.ಪಿ.ಗೌಡರ್ ಇತರರಿದ್ದರು.  
ಜಿಲ್ಲೆ

ಜನಸಾಮಾನ್ಯರ ಹಿತಕಾಯದ ಕಾಂಗ್ರೆಸ್

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಜನವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಎನ್‌ಡಿಎ ಒಕ್ಕೂಟದೊಂದಿಗೆ ಹೊಂದಾಣಿಕೆ ಅನಿವಾರ್ಯವಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಜೆಡಿಎಸ್ ಮತ್ತು ಬಿಜೆಪಿ ಒಂದಾಗಿವೆ ಎಂದು ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷ ರಾಜುನಾಯಕ ಹೇಳಿದರು.

ನಗರದ ಬನ್ನಿಗಿಡದ ಕ್ಯಾಂಪ್‌ನಲ್ಲಿ ಜೆಡಿಎಸ್ ಗಂಗಾವತಿ ವಿಧಾನಸಭೆ ಕ್ಷೇತ್ರದ ಕಚೇರಿ ಉದ್ಘಾಟಿಸಿ ಮಾತನಾಡಿದರು. ಜನ ಮತ್ತು ರೈತ ಪರಯೋಜನೆಗಳು ಜೆಡಿಎಸ್ ಆಡಳಿತಾವಧಿಯಲ್ಲಿ ಜಾರಿಯಾಗಿದ್ದು, ಎಲ್ಲ ವರ್ಗದವರನ್ನು ಸಮಾನತೆಯಿಂದ ನೋಡಿತ್ತು. ಸ್ಪಷ್ಟ ಸಿದ್ಧಾಂತಗಳಿಲ್ಲದೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಜನಸಾಮಾನ್ಯರ ಹಿತ ಬೇಕಿಲ್ಲ. ಲೋಕಸಭೆ ಚುನಾವಣೆ ಮುಗಿದ ನಂತರ ರಾಜ್ಯ ಸರ್ಕಾರ ಇರುವ ಬಗ್ಗೆ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಅನುಮಾನ ಕಾಡುತ್ತಿದೆ. ಲೋಕ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳ ಗೆಲುವಿಗಾಗಿ ಜೆಡಿಎಸ್ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಲಿದ್ದು, ಬೂತ್‌ಮಟ್ಟದಿಂದ ಪಕ್ಷ ಸಂಘಟಿಸಲಾಗುವುದು ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ಉತ್ತಮ ಭವಿಷ್ಯವಿದ್ದು, ತನ್ನದೇ ಆದ ಕಾರ್ಯಕರ್ತರ ಪಡೆ ಹೊಂದಿದೆ. ಜನಹಿತ ಮರೆತ ಕಾಂಗ್ರೆಸ್‌ಗೆ ಪಾಠ ಕಲಿಸಲು ಲೋಕಸಭೆ ಚುನಾವಣೆ ವೇದಿಕೆಯಾಗಲಿದ್ದು, ರಾಜ್ಯದಲ್ಲಿ ಎಚ್‌ಡಿಎ ಒಕ್ಕೂಟವೇ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದರು.

ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ರಾಜುನಾಯಕ ಅವರನ್ನು ನಗರ ಮತ್ತು ಗ್ರಾಮೀಣ ಕಾರ್ಯಕರ್ತರು ಸನ್ಮಾನಿಸಿದರು.
ಜೆಡಿಎಸ್ ಪಕ್ಷದ ಪದಾಧಿಕಾರಿಗಳಾದ ರಾಘವೇಂದ್ರ ಮಸ್ಕಿ, ಕೃಷ್ಣನಾಯಕ, ವಿಶ್ವನಾಥಸ್ವಾಮಿ, ನಾರಾಯಣರೆಡ್ಡಿ, ಯಮನೂರಿ ನಾಯಕ ಇತರರಿದ್ದರು.