ಜಿಲ್ಲೆ

ಸದಸ್ಯತ್ವ ನೋಂದಣಿ ಕಾರ್ಯಕ್ರಮ 30ರಂದು: ಜೆಡಿಎಸ್ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಾತ್ಯಾತೀತ ಜನತಾದಳ ಪಕ್ಷ ಸಂಘಟನೆಗಾಗಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಆ.30ರಂದು ಬೆಳಗ್ಗೆ 11 ಗಂಟೆಗೆ ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ‘ಜನರೊಂದಿಗೆ ಜಾತ್ಯಾತೀತ ಜನತಾದಳ’ ಎಂಬ ಶೀರ್ಷಿಕೆಯಡಿ ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ನಗರದ ಬಂದೀಗೌಡ ಬಡಾವಣೆಯ ತಮ್ಮ ನಿವಾಸದಲ್ಲಿ ದುದ್ದ ಹೋಬಳಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಜನರೊಂದಿಗೆ ಜನತಾದಳ ಕಾರ್ಯಕ್ರಮ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಆ.30ರಂದು ಆಯೋಜಿಸಲಾಗಿದೆ ಎಂದರು.

ಮಂಡ್ಯ ತಾಲೂಕಿನ ಗೊರವಾಲೆ ಗ್ರಾಮದ ಪಟೇಲ್ ಸಿದ್ದೇಗೌಡರು ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಅವರ ನಿಕಟವರ್ತಿಯಾಗಿದ್ದರು. ಗೊರವಾಲೆ ಗ್ರಾಮದಲ್ಲಿ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಲಾಗಿದ್ದು ದೇವೇಗೌಡರ ಕುಟುಂಬಸ್ಥರಿಂದಲೇ ಅನಾವರಣ ಮಾಡಬೇಕು ಎಂಬ ಒತ್ತಾಯವಾದ ಹಿನ್ನೆಲೆಯಲ್ಲಿ ಆ.31ರಂದು ನಿಖಿಲ್ ಕುಮಾರಸ್ವಾಮಿ ಅಂದಿನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಎರಡು ಕಾರ್ಯಕ್ರಮಕ್ಕೂ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಆ.25ರಂದು ಮಂಡ್ಯ ಮತ್ತು ಮೈಸೂರು ಭಾಗದ ಸಾವಿರಾರು ಭಕ್ತರು ನೂರಾರು ಕಾರುಗಳಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ತೆರಳುವ ಸಂಕಲ್ಪ ಮಾಡಲಾಗಿದೆ. ಈ ರ‌್ಯಾಲಿಗೆ ಪಕ್ಷಾತೀತವಾಗಿ ಆಗಮಿಸಬೇಕು. ಅಂದು ಬೆಳಗ್ಗೆ 4.30ಕ್ಕೆ ಕೆಆರ್‌ಎಸ್‌ನಿಂದ ಇಲವಾಲಕ್ಕೆ ಕಾರು ರ‌್ಯಾಲಿ ಹೊರಟು ಅಲ್ಲಿಂದ ಧರ್ಮಸ್ಥಳಕ್ಕೆ ಹೊರಡಲಾಗುವುದು. ಶ್ರೀ ಮಂಜುನಾಥನ ಆಶೀರ್ವಾದ ಪಡೆದು ಡಾ.ವಿರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ಸೂಚಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಬಾಲರಾಜು, ಶಂಕರೇಗೌಡ, ಶಿವಶಂಕರ್, ಶಿವಳ್ಳಿ ಸುರೇಶ್, ಮಾದೇಗೌಡ ಇತರರಿದ್ದರು.