ಜಿಲ್ಲೆ

ಮಂಡ್ಯದ ಜನ ಅನ್ಯಾಯ ಮಾಡಿಲ್ಲ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಕಳೆದ ಲೋಕಸಭೆ ಹಾಗೂ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನರು ನಮಗೆ ಅನ್ಯಾಯ ಮಾಡಿಲ್ಲ. ಆದರೆ ನಮ್ಮಿಂದಲೇ ಸಣ್ಣಪುಟ್ಟ ತಪ್ಪುಗಳಾಗಿವೆ. ಈ ಬಾರಿ ಅವುಗಳನ್ನು ತಿದ್ದಿಕೊಳ್ಳಲು ಸಿದ್ಧರಿದ್ದೇವೆ. ಆದ್ದರಿಂದ ಒಂದು ಅವಕಾಶ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ನಂಬಿಸಿ ನಮ್ಮ ಕುತ್ತಿಗೆ ಕುಯ್ದರು. ಇದನ್ನು ಸ್ವತಃ ಅವರೇ ಹೇಳಿದ್ದಾರೆ. ನಿಖಿಲ್ ಸೋಲಿಸಿ ಸುಮಲತಾ ಅವರನ್ನು ಗೆಲ್ಲಿಸಿದ್ದು ನಾವೇ ಎಂದು ಬಹಿರಂಗವಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ ಉತ್ತರ ಕೊಡುವ ಶಕ್ತಿ ಮಂಡ್ಯ ಜನರ ಕೈಯಲ್ಲಿ ಇದೆ. ನನ್ನ ಜನ್ಮ ಭೂಮಿ ಹಾಸನ, ರಾಜಕೀಯ ಭವಿಷ್ಯ ನೀಡಿದ್ದು ರಾಮನಗರ. ನನ್ನ ಜೀವ ಮಿಡಿಯುವುದು ಮಂಡ್ಯಗಾಗಿ. ಸ್ವಾಭಿಮಾನ ಎನ್ನುವುದು ಮಾತಿನಲ್ಲಿ ಅಲ್ಲ, ಕೆಲಸದಲ್ಲಿರಬೇಕು ಎಂದು ಹೇಳಿದರು.
ದೇವೇಗೌಡರಿಗೆ ರಾಜಕೀಯವಾಗಿ ಹಾಸನದಂತೆ ಹೆಚ್ಚು ಶಕ್ತಿ ನೀಡಿದ್ದು ಮಂಡ್ಯ. ನನ್ನ ಮಾತುಗಳು ನಾಟಕೀಯವಲ್ಲ. ನಾನು, ನನ್ನ ಕುಟುಂಬದ ಯಾರಿಗೂ ದ್ರೋಹ ಮಾಡಿದವರಲ್ಲ. ಬೆಳೆಯುವವವರನ್ನ ಹಿಂದೆ ನಿಂತು ಶಕ್ತಿ ತುಂಬಿದ್ದೇವೆ. ಈ ಸಭೆಗೆ ಬಂದಾಗ ನಿಮ್ಮ ಕೂಗು ಕೇಳಿದ್ದೇವೆ. ನಾನು ಅಥವಾ ನಿಖಿಲ್ ಸ್ಪರ್ಧಿಸುವ ನಿಮ್ಮ ಮಾತಿಗೆ ಶಿರಭಾಗಿ ನಮಸ್ಕಾರ ಮಾಡುತ್ತೇನೆ. ನಿಮ್ಮ ಮಾತಿಗೆ ಅಪಚಾರ ಮಾಡಲು ಹೋಗಲ್ಲ. ನಾನು ರಾಜಕೀಯಕ್ಕೆ ಬರಬೇಕೆಂದು ಕೊಂಡವನಲ್ಲ. ಸಿನಿಮಾ ಹಂಚಿಕೆದಾರನಾಗಿ ನಾನು ಕೆಲಸ ಮಾಡುತ್ತಿದ್ದೆ. ಆಕಸ್ಮಿಕವಾಗಿ ನಾನು ರಾಜಕೀಯಕ್ಕೆ ಬಂದೆ. ಮಂಡ್ಯ ಜಿಲ್ಲೆಯ ಜನರೊಂದಿಗೆ ಮೊದಲಿಂದಲೂ ನಾನು ಇದ್ದೇನೆ ಎಂದರು.
ದೇವೇಗೌಡರು ಹೊಟ್ಟೆಪಾಡಿಗಾಗಿ ಬಿಜೆಪಿ ಜತೆ ಸೇರಿದ್ದಾರೆಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ. ಅವರು ಹುಟ್ಟಿದಾಗಲೇ ಮಹಾರಾಜರ ವಂಶಸ್ಥರಿರಬೇಕು. ಅವರ ಬಗ್ಗೆ ನನಗಿಂತ ನಾಗಮಂಗಲದ ಜನತೆಗೆ ಗೊತ್ತಿರಬೇಕು. 1999ರ ಚುನಾವಣೆಯಲ್ಲಿ ಮೊದಲು ಅಭ್ಯರ್ಥಿ ಆಗಿದ್ದರು. ನಾವೆಲ್ಲರೂ ಆ ಚುನಾವಣೆಯಲ್ಲಿ ಸೋತಿದ್ದೆವು. ಬೆಳ್ಳೂರಿನಲ್ಲಿ ಒಂದು ಕಾರ್ಯಕ್ರಮದಲ್ಲಿ ಅವರ ಜತೆ ಭಾಗಿಯಾಗಿದ್ದೆ. ಆಗ ಚಲುವರಾಯಸ್ವಾಮಿ ಮೇಲೆ ಅಭಿವೃದ್ಧಿ ಆಗಿಲ್ಲವೆಂದು ಬೇಸರ ಆಗಬೇಡಿ, ವಿರೋಧ ಪಕ್ಷದವರು ಬಿಡುತ್ತಿಲ್ಲವೆಂದಿದ್ದೆ. ಇವರು ನನ್ನ ಹೊಟ್ಟೆಪಾಡಿನ ಬಗ್ಗೆ ಮಾತಾಡುತ್ತಾರೆ. ಹಿಂದೆ ನಮ್ಮ ಪಕ್ಷದ ಶಾಸಕರಾಗಿದ್ದ ವೇಳೆ ಆರು ತಿಂಗಳು ನನ್ನ ಬಳಿ ಗೋಳಾಡಿದ್ದರು ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಮಂಡ್ಯ ಜಿಲ್ಲೆಯ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು. ಆಗ ಎಲ್ಲರ ಮನೆಗೆ ಹೋಗಿ ಬಂದೆ. ಕಾಲುಬಾಯಿ ಜ್ವರ ಬಂದು ಹಸುಗಳು ಮೃತಪಟ್ಟಾಗ ನಾನು ಸ್ವಾಂತನ ಹೇಳಿದ್ದೆ. ಹೀಗಿರುವಾಗ ಮಂಡ್ಯಕ್ಕೆ ಕುಮಾರಸ್ವಾಮಿ ಕೊಡುಗೆ ಏನೆಂದು ಚಲುವರಾಯಸ್ವಾಮಿ ಕೇಳುತ್ತಾರೆ. ಇವಾಗ ನಾಟಿ ಸ್ಟೈಲ್ನಲ್ಲಿ ಚುನಾವಣೆ ಮಾಡುತ್ತಾರಂತೆ. ಇವರಿಗೆಲ್ಲ ನಾವು ಏನು ಅನ್ಯಾಯ ಮಾಡಿದ್ದೋ ಎಂದು ಟೀಕಿಸಿದ ಅವರು, ಚುನಾವಣೆ ವಿಷಯದಲ್ಲಿ ಒಂದು ಮಾತು ಹೇಳುತ್ತೇನೆ. ಅಂಬರೀಷ್ ನಾವೆಲ್ಲ ಒಟ್ಟಾಗಿ, ಪ್ರೀತಿಯಿಂದ ಬೆಳೆದವರು. ನಮ್ಮ ಪಕ್ಷದಿಂದಲೇ ಅವರು ಪಾರ್ಲಿಮೆಂಟ್ ಪ್ರವೇಶಿಸಿದರು. ನಾನು ಸಿಎಂ ಆಗಿದ್ದಾಗಲೇ ಡಾ.ರಾಜ್‌ಕುಮಾರ್ ಹಾಗೂ ಅಂಬರೀಷ್ ನಿಧನರಾದರು. ನಮ್ಮ ಅವಧಿಯಲ್ಲಿಯೇ ರಾಜ್‌ಕುಮಾರ್ ಅವರ ಸಮಾಧಿ ಮಾಡಲಾಯಿತು. ಅಂಬರೀಷ್ ಅವರ ಸಮಾಧಿಗೂ ಜಾಗ ಗುರುತಿಸಿ, ಗೌರವ ಕೊಟ್ಟೆ. ಬಡ ಕುಟುಂಬದಿಂದ ಸಿನಿಮಾರಂಗದಲ್ಲಿ ಸಾಧನೆ ಮಾಡಿದ ನಮ್ಮ ಸಮಾಜದ ವ್ಯಕ್ತಿ. ಅವರಿಗೆ ಗೌರವ ನೀಡುವ ಮೂಲಕ ಮಂಡ್ಯ ಜನರಿಗೂ ಗೌರವ ನೀಡಿದ್ದೇವೆ. ಸುಮಲತಾ ಅವರು ನಮ್ಮ ಅಕ್ಕ ಇದ್ದಂತೆ. ರಾಜಕೀಯದಲ್ಲಿ ಆಗ ಏನೋ ಆಗಿತ್ತು. ಈಗ ನಾವು ಸಂಘರ್ಷ ಮುಂದುವರಿಸಲ್ಲ ಎಂದು ಸ್ಪಷ್ಟಪಡಿಸಿದರು.