ಮಧುಗಿರಿ: ಧರ್ಮಸ್ಥಳ ಸೇರಿ ಸುತ್ತಮುತ್ತಲ ಪುಣ್ಯಕ್ಷೇತ್ರಗಳಿಗೆ ಪ್ರವಾಸಕ್ಕೆ ಹೋಗಿ ವಾಪಸಾಗುತ್ತಿದ್ದ ಜೆಡಿಎಸ್‌ನ ಪ್ರವಾಸ ಭಾಗ್ಯದ 4 ಬಸ್‌ಗಳನ್ನು ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಹನುಮಂತರಾಯಪ್ಪ ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ದೊಡ್ಡೇರಿ ಹೋಬಳಿಯ ಗಿಡದಾಗಲಹಳ್ಳಿಯ ಬಳಿ ಪ್ರವಾಸ ಭಾಗ್ಯದ ಬಸ್‌ಗಳನ್ನು ಚುನಾವಣಾ ಸಿಬ್ಬಂದಿ ವಶಕ್ಕೆ ಪಡೆದಿದ್ದು, ಬಸ್‌ನಲ್ಲಿದ್ದ ಯಾತ್ರಿಕರನ್ನು ಸುರಕ್ಷಿತವಾಗಿ ಗ್ರಾಮಕ್ಕೆ ತಲುಪಿಸಿದ್ದಾರೆ.
ಜೆಡಿಎಸ್‌ನವರು ಶಾಸಕ ವೀರಭದ್ರಯ್ಯಗೆ ಮತ ಚಲಾಯಿಸಿ ಎಂದು ಒತ್ತಾಯಿಸಿ ಮತದಾರರಿಗೆ ಧರ್ಮಸ್ಥಳ ಸೇರಿ ಸುತ್ತಮುತ್ತಲಿನ ಪುಣ್ಯ ಕ್ಷೇತ್ರಗಳಿಗೆ ಪ್ರವಾಸ ಕಳುಹಿಸಿದ್ದಾರೆ ಎಂದು ದೊಡ್ಡೇರಿ ಹೋಬಳಿಯ ಮುಖಂಡರು ಇತ್ತೀಚೆಗಷ್ಟೇ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು. ಎಚ್ಚೆತ್ತುಕೊಂಡ ಚುನಾವಣಾ ಸಿಬ್ಬಂದಿ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಪ್ರವಾಸದಿಂದ ವಾಪಸಾಗುತ್ತಿದ್ದ ಬಸ್‌ಗಳನ್ನು ಅಡ್ಡಗಟ್ಟಿ ವಶಕ್ಕೆ ಪಡೆದಿದ್ದಾರೆ.
ಜೆಡಿಎಸ್‌ನಿಂದ ಮತ್ತೆ ಪ್ರವಾಸ ಭಾಗ್ಯ
ಜೆಡಿಎಸ್‌ನಿಂದ ಧರ್ಮಸ್ಥಳ ಸೇರಿ ಮತ್ತಿತರ ಪುಣ್ಯಕ್ಷೇತ್ರಗಳಿಗೆ ಮತ್ತೆ ಪ್ರವಾಸ ಭಾಗ್ಯ ಕಲ್ಪಿಸಿದ್ದು, ಸೊಮವಾರ ರಾತ್ರಿ ಬಸ್‌ನಲ್ಲಿದ್ದ ಮುಖಂಡರು ಮತ್ತು ಮತದಾರರಿಗೆ ಶಾಸಕರು ಶುಭ ಕೋರಿರುವ ವಿಡಿಯೋ ವೈರಲ್ ಆಗಿದೆ. ಇತ್ತೀಚೆಗಷ್ಟೇ ಕಸಬಾ ವ್ಯಾಪ್ತಿಯ ಜೆಡಿಎಸ್‌ಮುಖಂಡರೊಬ್ಬರು ಪ್ರವಾಸ ಹೊರಟಿರುವ ತಂಡದ ಬಸ್‌ನಲ್ಲಿ ಶಾಸಕರು ಹಣ ಕಳುಹಿಸಿದ್ದು ಕಾಫಿ, ತಿಂಡಿ ಖರ್ಚಿಗೆ ಬಳಸಿಕೊಳ್ಳಿ. ಯಾರಾದರೂ ಕೇಳಿದರೆ ನಮ್ಮ ಸ್ವಂತ ಖರ್ಚಿನಲ್ಲಿ ಹೋಗಿ ಬರುತ್ತಿದ್ದೇವೆ ಎಂದು ಹೇಳಿ ಎಂದು ಮಾತನಾಡಿರುವುದನ್ನು, ಜತೆಯಲ್ಲಿ ಪ್ರವಾಸ ಹೊರಟಿರುವವರೇ ವೀಡಿಯೋ ಮಾಡಿ ಹರಿ ಬಿಟ್ಟಿದ್ದು, ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಶಾಸಕ ಎಂ.ವಿ.ವೀರಭದ್ರಯ್ಯನವರೇ ಸ್ವತಃ ಬಸ್ ಏರಿ ಪುಣ್ಯಕ್ಷೇತ್ರಗಳಿಗೆ ಪ್ರವಾಸಕ್ಕೆ ತೆರಳುತ್ತಿದ್ದ ಮತದಾರರಿಗೆ ಶುಭ ಕೋರಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.