ಹುಬ್ಬಳ್ಳಿ: ಕೇಂದ್ರ ಕೈಗಾರಿಕಾ ಸಚಿವ ಹಾಗೂ ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಕುರಿತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರ ಭಾಷಣದಲ್ಲಿ ಅವಹೇಳನಕಾರಿ ಹಾಗೂ ಅಸಭ್ಯ ಮಾತು ಬಳಸಿ ನಿಂದನೆ ಮಾಡಿರುವ ಸಚಿವ ಬಿ. ಝಡ್ ಜಮೀರ್ ಅಹ್ಮದ್ ಖಾನ್ ಅವರನ್ನು ಸಂಪುಟದಿಂದ ಕೈಬಿಡಬೇಕು, ಅಲ್ಲದೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಹಾನಗರ ಜಿಲ್ಲಾ ಜನತಾದಳ ಜಾತ್ಯತಿತ ಪಕ್ಷದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಅಸಭ್ಯ ಭಾಷೆ ಬಳಕೆ ಮಾಡುವುದಷ್ಟೇ ಅಲ್ಲ ಈಗಾಗಲೇ ರಾಜ್ಯದಲ್ಲಿ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ ಗಲಾಟೆಗಳಾಗಲು ಕಾರಣಕರ್ತರಾದ ಸಚಿವ ಜಮೀರ್ ಒಂದು ಸಮುದಾಯವನ್ನು ಓಲೈಸುವುದಕ್ಕಾಗಿ ಜಾತಿ ನಿಂದನೆ ಹೇಳಿಕೆ ನೀಡಿರುವುದು ಖಂಡನೀಯ.
ಹಾಗಾಗಿ ರಾಜ್ಯಪಾಲರು ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಬಿ. ಗಂಗಾಧರಮಠ, ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ನವೀನಕುಮಾರ ಮುಂತಾದವರು ಒತ್ತಾಯಿಸಿದ್ದಾರೆ.