ಶಿರಾ: ಕಾಂಗ್ರೆಸ್ ಸಹವಾಸ ಮಾಡಿದ್ದಕ್ಕೆ ಜನ ನನ್ನ ಒಪ್ಪಲಿಲ್ಲ, ಜೆಡಿಎಸ್ ಕಾರ್ಯಕರ್ತರು ಮೈತ್ರಿಯನ್ನು ಒಪ್ಪಿಲ್ಲ, ಶಿರಾದಿಂದ ನನಗೆ ರಾಜಕೀಯ ಶಕ್ತಿ ಬೇಕಿದೆ. ವಿಷ ಕೋಡ್ತಿರೋ, ಹಾಲು ಕೊಡ್ತಿರೋ ನಿಮಗೆ ಬಿಟ್ಟಿದ್ದು...
ಶಿರಾ ಉಪಚುನಾವಣೆ ಪ್ರಚಾರಕ್ಕೆ ಬುಧವಾರ ಚಾಲನೆ ನೀಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಮಾವೇಶಗೊಂಡಿದ್ದ ಸಾವಿರಾರು ಮುಖಂಡರ ಮುಂದೆ ಭಾವನಾತ್ಮಕವಾಗಿ ಮಾತನಾಡಿದ್ದು ಹೀಗೆ. ಕಾಂಗ್ರೆಸ್ ಜತೆಗಿನ ಸಿಎಂ ಪದವಿ ಮುಳ್ಳಿನ ಹಾಸಿಗೆಯಂತಾಗಿತ್ತು, ಪ್ರತಿ ಹಂತದಲ್ಲೂ ನಿಭಾಯಿಸುವುದು ತುಂಬ ಕಷ್ಟದ ಕೆಲಸವಾಗಿದು ್ದಅಧಿಕಾರ ನೀಡಿದ ಕುತಂತ್ರಿಗಳಿಂದ ಸಿಎಂ ಪದವಿ ತ್ಯಜಿಸಬೇಕಾಯಿತು ಎಂದರು.
ಶಿರಾ ಕ್ಷೇತ್ರದಲ್ಲಿ ನಾನು ನೋವಿನಿಂದ ಚುನಾವಣೆ ಮಾಡಬೇಕಾಗಿದೆ, ಬಿಜೆಪಿ ಹಾಗೂ ಕಾಂಗ್ರೆಸ್ ಅತ್ಯುತ್ಸಾಹದಿಂದ ಪ್ರಚಾರ ಅರಂಭಿಸಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಶಿರಾದಲ್ಲಿ ನಮ್ಮ ಪಕ್ಷದೊಂದಿಗೆ ಭಾವನಾತ್ಮಕ ಸಂಬಂಧವಿದ್ದು ಜೆಡಿಎಸ್ ಉಳಿಸುವ ಕೆಲಸ ಇಲ್ಲಿಂದಲೇ ಆಗಬೇಕು ಎಂದರು. ಈ ಹಿಂದೆ ಗ್ರಾಮವಾಸ್ತವ್ಯ ವಾಡಿದ ಸಂದರ್ಭದಲ್ಲಿ ಕಾಡುಗೊಲ್ಲರ ಮನೆಯಲ್ಲಿ ಉಳಿದಿದ್ದೆ, ಅವರು ಮಾಡಿದ ಸತ್ಕಾರ ಮರೆಯುವುದಿಲ್ಲ, ಕ್ಷೇತ್ರದಲ್ಲಿ ಗೊಲ್ಲ ಸಮುದಾಯದ ಮತ ನಿರ್ಣಾಯಕ. ಕಳೆದ ಸಾರ್ವತ್ರಿಕ ವಿಧಾನಸಭೆ ಚುನಾವಣಾ ಫಲಿತಾಂಶ ನೋಡಿ ರಾಜಕೀಯದಿಂದ ನಿರ್ಗಮಿಸಬೇಕು ಅಂದುಕೊಂಡಿದ್ದೆ ಎಂದು ಭಾವುಕರಾದರು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸಲು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ನಾನು ಸಂಸತ್‌ನಲ್ಲಿ ಹೋರಾಟ ಮಾಡುತ್ತೇವೆ ಎಂದು ಭರವಸೆ ನೀಡಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಶಾಸಕರಾದ ಡಿ.ಸಿ.ಗೌರಿಶಂಕರ್, ತಿಪ್ಪೇಸ್ವಾಮಿ, ಮಾಜಿ ಸಚಿವ ಡಿ.ನಾಗರಾಜಯ್ಯ, ಮುಖಂಡರಾದ ಸಿ.ಬಿ.ಸುರೇಶ್‌ಬಾಬು, ಸುಧಾಕರಲಾಲ್, ತಿಮ್ಮರಾಯಪ್ಪ, ಎಂ.ವಿ.ವೀರಭದ್ರಯ್ಯ, ಆರ್.ಸಿ.ಅಂಜಿನಪ್ಪ, ಟಿ.ಆರ್.ನಾಗರಾಜು ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಭ್ರಷ್ಟಾಚಾರದಲ್ಲಿ ತೊಡಗಿದೆ ಬಿಜೆಪಿ ಸರ್ಕಾರ: ಯಲಹಂಕ ತಹಸೀಲ್ದಾರ್ ಪೋಸ್ಟಿಂಗ್‌ಗೆ 1 ಕೋಟಿ ರೂ. ಲಂಚ ನೀಡಲು ಬಂದಿದ್ದರೂ ನಾನು ಒಪ್ಪಿರಲಿಲ್ಲ. ಆದರೆ, ಬಿಜೆಪಿ ಸರ್ಕಾರದಲ್ಲಿ ಆತನಿಗೆ ಪೋಸ್ಟಿಂಗ್ ನೀಡಲಾಗಿದೆ, ಅಲ್ಲಿನ ಸ್ಥಳೀಯ ಶಾಸಕರಿಗೂ 50ಲಕ್ಷ ರೂ. ನೀಡಲಾಗಿದೆ. ಈ ತಹಸೀಲ್ದಾರ್ ಅಮಾನತಿಗೆ ಈಗ ಶಿಾರಸು ಮಾಡಲಾಗಿದೆ. ಇದೇ ಕಳ್ಳದುಡ್ಡಿನಿಂದ ಶಿರಾದಲ್ಲಿ ಗೆಲ್ಲುವ ಹುಂಬತನದ ಮಾತು ಬಿಜೆಪಿ ಮುಖಂಡರ ಬಾಯಲ್ಲಿ ಬರುತ್ತಿದೆ, ಕೆ.ಆರ್.ಪೇಟೆಯಲ್ಲಿ ಗೆದ್ದಂತೆ ಇಲ್ಲಿಯೂ ಗೆಲ್ಲುವ ಕನಸು ಕಾಣುತ್ತಿದ್ದಾರೆ, ಲೂಟಿ ಸರ್ಕಾರದಿಂದ ಶಿರಾ ಜನರನ್ನು ಕೊಂಡುಕೊಂಡು ಗೆಲ್ಲಲು ಸಾಧ್ಯವಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಬೆಮೆಲ್, ವಾಸು ಗೈರು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಗೆ ಮಾಜಿ ಸಚಿವ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಹಾಗೂ ಎಂಎಲ್ಸಿ ಬೆಮೆಲ್ ಕಾಂತರಾಜು ಗೈರಾಗಿದ್ದಿದ್ದು ಎದ್ದುಕಾಣುತ್ತಿತ್ತು. ಜೆಡಿಎಸ್‌ನಿಂದ ಬಹುತೇಕ ಒಂದು ಕಾಲು ಹೊರಗಿಟ್ಟಿರುವ ಶ್ರೀನಿವಾಸ್ ದ, ಬೆಮೆಲ್ ಅನುಪಸ್ಥಿತಿ ಪಕ್ಷದ ವಲಯದಲ್ಲಿ, ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ.