ಶಿವಮೊಗ್ಗ: ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ದೊಡ್ಡ ಅಂತರದ ಗೆಲುವಿನಲ್ಲಿ ಜೆಡಿಎಸ್ ಪಾತ್ರವಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಹೇಳಿದರು.
ಮೈತ್ರಿ ನಿಶ್ಚಯವಾದ ಬಳಿಕ ಪಕ್ಷದ ಕಾರ್ಯಕರ್ತರು, ಮುಖಂಡರು ಬಿಜೆಪಿ ಜತೆ ಸರಿಸಮಾನಾಗಿ ಕೆಲಸ ಮಾಡಿದ್ದಾರೆ. ಶಿವಮೊಗ್ಗ ಕ್ಷೇತ್ರ ಮಾತ್ರವಲ್ಲದೆ ಇಡೀ ರಾಜ್ಯದಲ್ಲೇ ಮೈತ್ರಿ ಧರ್ಮ ಪಾಲನೆಯಾಗಿದೆ. ಶಿವಮೊಗ್ಗದಲ್ಲಿ ಬಿವೈಆರ್ ಗೆಲುವು ಸರಾಗವಾಗಲು ಹಾಗೂ ಮೈತ್ರಿ ಹೆಚ್ಚುವಲ್ಲಿ ನಮ್ಮದೂ ಪಾಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಓರ್ವ ಸಂಸದರಾಗಿ ರಾಘವೇಂದ್ರ ಅತ್ಯಂತ ಯಶಸ್ವಿಯಾಗಿದ್ದಾರೆ. ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ರಸ್ತೆ, ವಿಮಾನ ನಿಲ್ದಾಣ, ಸಮುದಾಯ ಭವನ, ರೈಲ್ವೆ ಮೇಲ್ಸೆತುವೆ, ಪ್ರವಾಸೋದ್ಯಮ ಅಭಿವೃದ್ಧಿ, ಅನೇಕ ರೈಲುಗಳು ಅವರ ಕೊಡುಗೆ. ಐದು ವರ್ಷದಲ್ಲಿ ಮತ್ತಷ್ಟು ಕೆಲಸ ಮಾಡಲು ಅನುಕೂಲವಾಗಲಿದೆ ಎಂದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಬಿಜೆಪಿಯೊಂದಿಗಿನ ಮೈತ್ರಿ ಯಶಸ್ವಿಯಾಗಿದೆ. ಈಗ ಚುನಾವಣೆ ಮುಗಿದಿದೆ. ಇನ್ನಾದರೂ ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸ ಮಾಡಲಿ. ಗ್ಯಾರಂಟಿಗಳನ್ನು ಸ್ಥಗಿತಗೊಳಿಸದೆ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ನಗರಾಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ಸಂಗಯ್ಯ, ತ್ಯಾಗರಾಜ್, ಎಸ್.ಎಲ್.ನಿಖಿಲ್, ಗಂಧದಮನೆ ನರಸಿಂಹ, ವಿನಯ್ ಸುದ್ದಿಗೋಷ್ಠಿಯಲ್ಲಿದ್ದರು.