ಅರಸೀಕೆರೆ: ಕ್ಷೀರ ಕ್ರಾಂತಿಯ ಮೂಲಕ ಜಿಲ್ಲೆಯ ಅನ್ನದಾತರ ಬದುಕು ಹಸನುಗೊಳಿಸುವ ಕೆಲಸ ಮಾಡಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ತಾಲೂಕಿನ ಕೆಂಕೆರೆ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿ ಮಾತನಾಡಿದರು.
ಜಿಲ್ಲೆಯ ಕೆಎಂಎಫ್ ಘಟಕ ರೈತರ ಪಾಲಿಗೆ ಕಾಮಧೇನುವಾಗಿ ಪರಿಣಮಿಸಿದೆ. ವಾರ್ಷಿಕ ಸಹಸ್ರಾರು ಕೋಟಿ ರೂ. ವಹಿವಾಟು ನಡೆಯುತ್ತಿರುವುದು ಸಾಮಾನ್ಯ ಸಂಗತಿಯಲ್ಲ. ಇಂತಹ ಮಹತ್ವದ ಕಾರ್ಯವನ್ನು ಎಚ್.ಡಿ.ರೇವಣ್ಣ ಮಾಡಿದ್ದಾರೆ ಎಂಬುದನ್ನು ಜಿಲ್ಲೆಯ ಜನರು ಮರೆಯಬಾರದು. ಸಂಸದ ಪ್ರಜ್ವಲ್ ರೇವಣ್ಣ ಕಳೆದ ಐದು ವರ್ಷದಲ್ಲಿ 16 ಸಾವಿರ ಕೋಟಿ ರೂ.ಗೂ ಹೆಚ್ಚಿನ ಅನುದಾನ ತಂದು ಕೆಲಸ ಮಾಡಿದ್ದಾನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ನಿಮ್ಮ ಮನೆ ಮಗನಂತಿರುವ ಯುವಕನಿಗೆ ಆಶೀರ್ವಾದ ಬೇಕಿದೆ ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ, ಮೂರು ಬಾರಿ ಶಾಸಕ ಹಾಗೂ ಒಮ್ಮೆ ರಾಜ್ಯ ಗೃಹಮಂಡಳಿ ಅಧ್ಯಕ್ಷನಾಗಿ ಮಾಡಿದ್ದು ನಾವು. ಆದರೆ ಇದನ್ನು ಮರೆತು ವ್ಯಕ್ತಿಯೊಬ್ಬರು ಧಿಮಾಕು ತೋರುತ್ತಿದ್ದಾರೆ. ಇಂತಹ ವ್ಯಕ್ತಿಗೆ ತಕ್ಕಪಾಠ ಕಲಿಸುವ ಜತೆಗೆ ಪ್ರಜ್ವಲ್ ರೇವಣ್ಣನಿಗೆ ಮತಹಾಕಿ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.
ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ರೈತರ ಕಲ್ಯಾಣ ಮನಗಂಡು ಪ್ರತಿ ಹಳ್ಳಿಯಲ್ಲೂ ಹಾಲಿನ ಡೇರಿ ಆರಂಭಿಸಲು ಅನುವು ಮಾಡಿಕೊಟ್ಟಿದ್ದೇನೆ. ಶಾಲೆ, ಕಾಲೇಜುಗಳ ಸ್ಥಾಪನೆ ಒಳಗೊಂಡಂತೆ ಅರಸೀಕೆರೆ ಕ್ಷೇತ್ರಕ್ಕೆ ಸಹಸ್ರಾರು ಕೋಟಿ ರೂ. ಅನುದಾನ ಕೊಡಿಸುವ ಕೆಲಸ ಮಾಡಿದ್ದೇನೆ ಎಂದರು.
ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ, ಹೊಸೂರು ಗಂಗಾಧರ್, ಹುಲ್ಲೇಕೆರೆ ಕುಮಾರ್, ಜಿಪಂ ಮಾಜಿ ಸದಸ್ಯ ಬಾಣಾವರ ಅಶೋಕ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸಯ್ಯದ್ ಸಿಕಂದರ್, ಕೆಂಕೆರೆ ಕೇಶವಮೂರ್ತಿ, ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಹರ್ಷವರ್ಧನ್‌ರಾಜ್, ಲಾಳನಕೆರೆ ಯೋಗೀಶ್, ಬಸವಲಿಂಗಪ್ಪ ಇತರರು ಇದ್ದರು.