ALKOD HANUMANTAPPA 
ಜಿಲ್ಲೆ

ಜೆಡಿಎಸ್ ವಿಭಾಗ ಮಟ್ಟದ ಸಮಾವೇಶ ನಾಳೆ

ಕೊಪ್ಪಳ: ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಮುಂದಾಗಿದ್ದೇವೆ. ವಿಭಾಗವಾರು ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ.

ಸೆ.27ರಂದು ಮಧ್ಯಾಹ್ನ 12ಗಂಟೆಗೆ ಕೊಪ್ಪಳದ ಶಿವಶಾಂತವೀರ ಮಂಗಲ ಭವನದಲ್ಲಿ ಜೆಡಿಎಸ್ ಪುನಶ್ಚೇತನ ಪರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಹನುಮಂತಪ್ಪ ಆಲ್ಕೊಡ್ ತಿಳಿಸಿದರು.

ರಾಜ್ಯದಲ್ಲಿ ಎಚ್.ಡಿ.ದೇವೆಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅನೇಕ ಜನರಪ ಕಾರ್ಯಕ್ರಮ ನೀಡಿದ್ದಾರೆ. ಅವುಗಳನ್ನು ತಮ್ಮ ಕಾರ್ಯಕ್ರಮಗಳೆಂದು ಇತರ ಪಕ್ಷ ಬಿಂಬಿಸಿಕೊಳ್ಳುತ್ತಿವೆ.

ನಾವು ಸರಿಯಾಗಿ ಜನತೆಗೆ ಮನವರಿಕೆ ಮಾಡಿಕೊಡುವಲ್ಲಿ ಎಡವಿದ್ದೇವೆ. ಈಗ ಅವುಗಳನ್ನು ಜನರಿಗೆ ತಲುಪಿಸುವ ಕಾಲ ಬಂದಿದೆ. ಸೆ.26ರಿಂದ ವಿಭಾಗವಾರು ಸಮಾವೇಶ ನಡೆಸುತ್ತಿದ್ದೇವೆ.

ಸೆ.26ರಂದು ಬೀದರ್‌ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಸೆ.27ರಂದು ರಾಯಚೂರು, ವಿಜಯನಗರ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯ ಸಮಾವೇಶ ಕೊಪ್ಪಳದಲ್ಲಿ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹಗರಿ ಬೊಮ್ಮನಳ್ಳಿ ಶಾಸಕ ನೇಮಿರಾಜ ನಾಯ್ಕ ಮಾತನಾಡಿ, ಕಾಂಗ್ರೆಸ್ ತನ್ನ ಅನುಕೂಲಕ್ಕೆ ತಕ್ಕಂತೆ ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಈಗ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಟೀಕಿಸುತ್ತಿದ್ದಾರೆ. ಅವರು ಮಾಡಿಕೊಂಡರೆ ಪವಿತ್ರ.

ಇತರರು ಮಾಡಿಕೊಂಡರೆ ಅಪವಿತ್ರ ಎನ್ನುತ್ತಾರೆ. ಅವರು ಐಎನ್‌ಡಿಐಎ ಮಾಡಿಕೊಳ್ಳಬಹುದು. ನಾವು ಎನ್‌ಡಿಎ ಮಾಡಿಕೊಳ್ಳಬಾರದಾ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.
ಮಾಜಿ ಸಚಿವ ವೆಂಟಕರಾವ ನಾಡಗೌಡ ಮಾತನಾಡಿ, ಕಾಂಗ್ರೆಸ್‌ನಲ್ಲಿ ಸಾಕಷ್ಟು ಗೊಂದಲಗಳಿವೆ. ಅದನ್ನು ಮುಚ್ಚಿಕೊಳ್ಳಲು ಡಿಸಿಎಂ ಡಿ.ಕೆ.ಶಿವಕುಮಾರ ಇತರ ಪಕ್ಷದ ಮುಖಂಡರೊಡನೆ ಕಾಣಿಸಿಕೊಳ್ಳುತ್ತಿದ್ದಾರೆ.

ಮೈತ್ರಿ ವಿಷಯವಾಗಿ ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕೆಲವರು ವೈಯಕ್ತಿಕ ವಿಚಾರ ಪ್ರಸ್ತಾಪಿಸಿದ್ದಾರೆ. ಎಲ್ಲರ ಒಪ್ಪಿಗೆ ಪಡೆದೇ ವರಿಷ್ಠರು ಮೈತ್ರಿಗೆ ಸಮ್ಮತಿಸಿದ್ದಾರೆಂದರು.

ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ಮಾತನಾಡಿ, ಹೈಕ ಭಾಗಕ್ಕೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾಗಿ ತಿಳಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ ಇತರರಿದ್ದರು.