ಜಿಲ್ಲೆ

ನ.೨೦ ರಂದು ಪಂಚರತ್ನ ರಥಯಾತ್ರೆಗೆ ಚಾಲನೆ

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಿರುವ ಪಂಚರತ್ನ ರಥಯಾತ್ರೆಗೆ ನ.೨೦ ರಂದು ಕೊಡ್ಲಿಪೇಟೆಯಲ್ಲಿ ಚಾಲನೆ ನೀಡ ಲಾಗುವುದೆಂದು ಜೆಡಿ(ಎಸ್) ಮಡಿಕೇರಿ ಕ್ಷೇತ್ರದ ಸಂಭವನೀಯ ಅಭ್ಯರ್ಥಿ ನಾಪಂಡ ಮುತ್ತಪ್ಪ ಹೇಳಿದ್ದಾರೆ.

ಟಾಟಾ ಎಸ್ ವಾಹನವನ್ನು ಪಂಚರತ್ನ ರಥಯಾತ್ರೆಗೆ ಸಜ್ಜುಗೊಳಿಸಲಾಗಿದೆ. ಎಲ್‌ಇಡಿ ಟಿವಿ ಪರದೆ ಮೂಲಕ ಜೆಡಿಎಸ್ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಮಾಡುವ ಕೆಲಸಗಳ ಬಗ್ಗೆ ಭರವಸೆ ನೀಡಲಾಗುತ್ತದೆ. ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೪೮ ಗ್ರಾಮ ಪಂಚಾಯಿತಿ, ೧ ನಗರಸಭೆ, ೨ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರಥ ಸಂಚರಿಸಲಿದೆ. ಪ್ರತಿನಿತ್ಯ ಈ ರಥದೊಂದಿಗೆ ತಾನು ತೆರಳುವುದಾಗಿ ನಾಪಂಡ ಮುತ್ತಪ್ಪ ಮಾಹಿತಿ ನೀಡಿದ್ದಾರೆ.

ಕೊಡ್ಲಿಪೇಟೆಯಲ್ಲಿ ರಥಕ್ಕೆ ಚಾಲನೆ ನೀಡುವ ಸಂದರ್ಭ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ ಸೇರಿದ್ದಂತೆ ಹಲವು ರಾಜ್ಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಆ ಮೂಲಕ ೨೦೨೩ರ ವಿಧಾನಸಭೆ ಚುನಾವಣೆ ಎದುರಿಸಲು ಪಕ್ಷ ಸಜ್ಜುಗೊಳ್ಳುತ್ತಿದೆ ಎಂದಿದ್ದಾರೆ.

ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪರಿಪೂರ್ಣ ಪರಿಹಾರ ಘೋಷ ವಾಕ್ಯದೊಂದಿಗೆ ಪಂಚರತ್ನ ರಥಯಾತ್ರೆ ಸಾಗಲಿದೆ. ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯವೇ ಸಂಪತ್ತು, ರೈತ ಚೈತನ್ಯ, ವಸತಿಯ ಆಸರೆ, ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ ವಿಷಯ ಇಟ್ಟು ಕೊಂಡು ಜೆಡಿಎಸ್ ವಿಧಾನಸಭೆ ಚುನಾವಣೆ ಎದುರಿಸಲಿದೆ ಎಂದು ನಾಪಂಡ ಮುತ್ತಪ್ಪ ಮಾಹಿತಿ ನೀಡಿದ್ದಾರೆ.