ಜಿಲ್ಲೆ

ರೈತ ಸಂಘದ ಹೋರಾಟ ರಾಜಕೀಯ ಪ್ರೇರಿತ: ಶಾಸಕ ಎಂ.ಶ್ರೀನಿವಾಸ್ ಆರೋಪ

reportermys

ಮಂಡ್ಯ: ತಾಲೂಕಿನ ಹನಕರೆ ಮತ್ತು ಹಳೆಬೂದನೂರು ಸಮೀಪ ಅಂಡರ್‌ಪಾಸ್ ನಿರ್ಮಿಸುವಂತೆ ರೈತ ಸಂಘದ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ ಎಂದು ಶಾಸಕ ಎಂ.ಶ್ರೀನಿವಾಸ್ ಆರೋಪಿಸಿದರು.

ವೈಜ್ಞಾನಿಕ ರೀತಿಯಲ್ಲಿ ಜನೋಪಯೋಗಿ ಅಂಡರ್‌ಪಾಸ್ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ 2021ರ ಸೆ.6ರಂದು ಮನವಿ ಸಲ್ಲಿಸಿದ್ದೇನೆ. 2022ರಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಮನವಿ ಸಲ್ಲಿಸಿದ್ದು, ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಮನವಿ ಪತ್ರ ಬರೆದು ವೈಜ್ಞಾನಿಕ ಅಂಡರ್‌ಪಾಸ್ ನಿರ್ಮಾಣಕ್ಕೆ ಹೇಳಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಇದಲ್ಲದೆ, ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಅವರಿಗೂ 2022ರ ಮೇ 22ರಂದು ಮನವಿ ಸಲ್ಲಿಸಿ ಒತ್ತಾಯ ಮಾಡಿದ್ದೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮೇ.30ರಂದು ಮನವಿ ಸಲ್ಲಿಸಿ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿದ್ದರ ಹಿನ್ನೆಲೆಯಲ್ಲಿ ಅವರೂ ಸಹ ಪ್ರಾಧಿಕಾರದ ಅಧಿಕಾರಿಗೆ ಸರಿಯಾದ ಕ್ರಮ ವಹಿಸುವಂತೆ ಸೂಚಿಸಿದ್ದರು. ಜ.5ರಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೆದ್ದಾರಿ ಪರಿಶೀಲನೆಗೆ ಆಗಮಸಿದ್ದ ವೇಳೆ ಸಚಿವರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಪ್ರಾಧಿಕಾರಕ್ಕೆ ಹಲವಾರು ಬಾರಿ ಪತ್ರ ವ್ಯವಹಾರ ಮಾಡಿದ್ದೇನೆ. ಇಷ್ಟೇ ಅಲ್ಲದೆ ಸುತ್ತಮುತ್ತಲ ಗ್ರಾಮಸ್ಥರೊಂದಿಗೂ ಸ್ಥಳದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದ್ದೇವೆ ಎಂದು ವಿವರಿಸಿದರು.

ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಹೆದ್ದಾರಿ ಪ್ರಾಧಿಕಾರ ೆ.14ರಂದೇ ಅಂಡರ್‌ಪಾಸ್ ನಿರ್ಮಾಣಕ್ಕೆ ಆದೇಶ ಹೊರಡಿಸಿದೆ. ಇದನ್ನು ತಿಳಿದಿದ್ದರೂ ಸಹ ರೈತ ಸಂಘದ ಮಧುಚಂದನ್ ಜನರನ್ನು ಕಟ್ಟಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡ ರವಿಕುಮಾರ್ ಗಣಿಗ ಅವರು ಸಾಮಾಜಿಕ ಜಾಲತಾಣದಲ್ಲಿ ಸುಖಾಸುಮ್ಮನೆ ಫೋಸ್ಟ್ ಮಾಡಿ ಗೊಂದಲ ಉಂಟುಮಾಡಿದ್ದಾರೆ. ಇದು ರಾಜಕೀಯ ಪ್ರೇರಿತ ಪ್ರತಿಭಟನೆ. ಇನ್ನೂ ಹೆದ್ದಾರಿ ಕಾಮಗಾರಿ ಪೂರ್ಣವಾಗಿಲ್ಲ. ಸಾಂಕೇತಿಕವಾಗಿ ಉದ್ಘಾಟನೆಯಾದರೂ ಅಂಡರ್‌ಪಾಸ್ ಮಾಡುತ್ತದೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಗರಸಭಾಧ್ಯಕ್ಷ ಎಚ್.ಎಸ್.ಮಂಜು, ಸದಸ್ಯೆ ಮಂಜುಳಾ ಉದಯಶಂಕರ್, ಜೆಡಿಎಸ್ ತಾಲೂಕು ಅಧ್ಯಕ್ಷ ತಿಮ್ಮೇಗೌಡ, ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಕಿರಣ್‌ಕುಮಾರ್, ಮಹೇಶ್, ಜಯರಾಂ ಇದ್ದರು.