ಚನ್ನಪಟ್ಟಣ: ಬಿಜೆಪಿಯೊಂದಿಗೆ ಮೈತ್ರಿಯಿಂದ ಮುಸ್ಲೀಂ ಸಮೂದಾಯ ಜೆಡಿಎಸ್ನಿಂದ ದೂರಾಗುತ್ತಿದೆ ಎನ್ನುವ ಕೂಗಿನ ನಡುವೆಯೇ ಎಚ್ ಡಿ ಕುಮಾರಸ್ವಾಮಿ ಅವರು ಪ್ರತಿನಿಧಿಸುತ್ತಿರುವ ಚನ್ನಪಟ್ಟಣದ ಕ್ಷೇತ್ರದ ಮುಸ್ಲೀಂ ಸಮೂದಾಯದ ಮುಖಂಡರು ಪಕ್ಷದ ನಾಯಕರ ನಿಲುವಿಗೆ ಬೆಂಬಲವಾಗಿ ನಿಂತಿದ್ದು, ಜಮೀರ್ ಅಹಮ್ಮದ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದ ಪ್ರವಾಸಿಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಜೆಡಿಎಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಸೈಯದ್ ಫಾಜಿಲ್, ಜೆಡಿಎಸ್ ಪಕ್ಷ ಯಾವತ್ತಿಗೂ ಅಲ್ಪಸಂಖ್ಯಾತರ ಪರವಿದೆಯೇ ವಿನಾ, ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿಲ್ಲ. ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆಯೇ ಹೊರತು ವಿಲೀನ ಮಾಡಿಕೊಂಡಿಲ್ಲ. ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಕಾರಣ ಸಮಸ್ತ ಮುಸ್ಲೀಂ ಸಮುದಾಯ ಕುಮಾರಸ್ವಾಮಿ ವಿರುದ್ಧ ನಿಲ್ಲುತ್ತದೆ ಎನ್ನುವುದು ತಪ್ಪು ಕಲ್ಪನೆ. ಯಾರೋ ಕೆಲ ಮುಖಂಡರು ಜೆಡಿಎಸ್ ತೊರೆದ ಮಾತಕ್ಕೆ ಪಕ್ಷಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಕ್ಷೇತ್ರದ ಸಮುದಾಯ ಎಂದಿಗೂ ಕುಮಾರಣ್ಣನ ಪರ ನಿಲ್ಲುತ್ತದೆ ಎಂದು ಸ್ಪಷ್ಟಪಡಿಸಿದರು.
ಎನ್ಆರ್‌ಸಿ , ಹಲಾಲ್ ಕಟ್, ಹಿಜಾಬ್ ವಿಚಾರದಲ್ಲಿ ನಮ್ಮ ಅಲ್ಪಸಂಖ್ಯಾತರ ಪರ ಯಾವ ರಾಜಕಾರಣಿಗಳು ನಿಂತಿಲ್ಲ. ಎಲ್ಲಾ ವಿಚಾರದಲ್ಲೂ ನಮ್ಮ ಸಮುದಾಯದ ಜೊತೆ ಇದ್ದವರು ಕುಮಾರಸ್ವಾಮಿ ಮಾತ್ರ. ಕುಮಾರಸ್ವಾಮಿ ನಮ್ಮ ಸಮುದಾಯಕ್ಕೆ ಯಾವುದೇ ದ್ರೋಹ ಮಾಡಿಲ್ಲ. ನಾವೆಂದಿಗೂ ಕುಮಾರಸ್ವಾಮಿ ಪರ ಇರುತ್ತೇವೆ ಎಂದರು.
ಜಮೀರ್ ವಿರುದ್ಧ ವಾಗ್ದಾಳಿ;
ಕುಮಾರಸ್ವಾಮಿ ಚಡ್ಡಿ ಕುರಿತು ಸಚಿವ ಜಮೀರ್ ಅಹಮ್ಮದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಫಾಜಿಲ್, ಕುಮಾರಸ್ವಾಮಿಯವರು ಚಡ್ಡಿ ಹಾಕ್ತಾರೋ, ಲುಂಗಿ ಹಾಕ್ತಾರೋ.. ಈ ಹಿಂದೆ 2006ರಲ್ಲಿ ಬಿಜೆಪಿಯ ಸಿ.ಟಿ.ರವಿಯೊಂದಿಗೆ ಜಮೀರ್ ಅಹ್ಮದ್ ನಿಂತಿದ್ದರಲ್ಲ ಅವಾಗ ಅವರು ಯಾವ ಚಡ್ಡಿ ಧರಿಸಿದ್ದರು ಎಂದು ಸಿ.ಟಿ.ರವಿಯೊಂದಿಗೆ ಸಚಿವ ಜಮೀರ್ ಅಹ್ಮದ್ ನಿಂತಿರುವ ಪೋಟೊ ಪ್ರದರ್ಶಿಸಿ ಜಮೀರ್ ಹೇಳಿಕೆಗೆ ಟಾಂಗ್ ನೀಡಿದರು. ಚನ್ನಪಟ್ಟಣ ಸೇರಿದಂತೆ
ರಾಜ್ಯದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಬದುಕುತ್ತಾ ಇದ್ದೀವಿ. ಕುಮಾರಸ್ವಾಮಿ ನಮಗೆ ಯಾವತ್ತೂ ಅನ್ಯಾಯ ಮಾಡಿಲ್ಲ.
ಮುಸ್ಲಿಂ ಹೆಸರೇಳಿ ರಾಜಕೀಯ ಮಾಡ್ತಾ ಇರೋದು ನೀವು. ಚಡ್ಡಿ-ಗಿಡ್ಡಿ ಅಂತೆಲ್ಲಾ ಹೇಳಬೇಡಿ. ಜಮೀರ್ ಅವರೇ ನಿಮ್ಮನ್ನು ಹುಟ್ಟಿಸಿದ್ದೇ ಜೆಡಿಎಸ್.!
ನಿಮ್ಮ ರಾಜಕೀಯದ ತಾಯಿ ಜೆಡಿಎಸ್. ಇಲ್ಲದಿದ್ದರೆ, ನೀವು ಬಸ್ ಓಡಿಸಿಕೊಂಡೇ ಇರಬೇಕಿತ್ತು ಎಂದು ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದರು.
ಈ ವೇಳೆ ಅಧ್ಯಕ್ಷ ಪಿ. ಪ್ರಶಾಂತ್, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ನಗರಾಧ್ಯಕ್ಷ ತೌಶಿಪ್, ಮುಖಂಡರಾದ ಅತೀಕ್ ಮುನ್ನಾವರ್, ಜಾವೀದ್ ಸೇರಿದಂತೆ ಹಲವರು ಇದ್ದರು.