ಮಂಡ್ಯ: ನಮ್ಮ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಗಳು ಈಗಾಗಲೇ ಜನಮನ ಸೂರೆಗೊಂಡಿವೆ. ಬಿಜೆಪಿಯ ಬಿರುಗಾಳಿಯನ್ನು ಪಂಚರತ್ನ ಯೋಜನೆಯ ಚಂಡಮಾರುತ ಕೊಚ್ಚಿಹಾಕಲಿದೆ. ಇನ್ನೂ ನಾಲ್ಕೈದು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಗಲುಗನಸು ಕಾಣುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ಟೀಕಿಸಿದರು.
ಇತ್ತೀಚೆಗೆ ಮದ್ದೂರಿನಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಸಮಾವೇಶದ ಸಭೆಯಲ್ಲಿ ಸಿಎಂ ಅವರು ಜಿಲ್ಲೆಯಲ್ಲಿ ಬದಲಾವಣೆ ಗಾಳಿ ಬೀಸಲು ಆರಂಭವಾಗಿದೆ. 2023ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಪ್ರಕ್ರಿಯೆ ಮಂಡ್ಯ ಜಿಲ್ಲೆಯಿಂದಲೇ ಆರಂಭವಾಗಲಿದೆ ಎಂದು ಹೇಳಿರುವುದು ಹಾಸ್ಯಾಸ್ಪದ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
ಮಂಡ್ಯ ಜೆಡಿಎಸ್ ಭದ್ರಕೋಟೆ. ಕಳೆದ ವಿಧಾನಸಭಾ ಚುನಾವಣೆ ಮಾದರಿಯಲ್ಲಿ ಈ ಸಲವೂ ಎಲ್ಲ ಏಳೂ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್ ಅವರು ಜೆಡಿಎಸ್ ಜೋಕರ್ ಪಕ್ಷವೆಂದು ಹೇಳಿರುವುದು ಖಂಡನೀಯ. ನಮ್ಮ ನಾಯಕರ ಬಳಿ ಬಂದು ಭಿಕ್ಷಾಂದೇಹಿ ಎಂದು ಎಷ್ಟು ಬಾರಿ ಕೇಳಿಹೋಗಿದ್ದೀರಿ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳಲಿ ಎಂದು ತಿಳಿಸಿದರು.
ಮದ್ದೂರಿನಲ್ಲಿ ಜನಸಂಕಲ್ಪ ಯಾತ್ರೆ ಯಶಸ್ಸು ಕಂಡಿದೆ ಎಂದು ಸುಳ್ಳು ಹೇಳುತ್ತಾರೆ. ಆದರೆ ಜನತೆಗೆ ಆಸೆ, ಆಮಿಷಗಳನ್ನು ಒಡ್ಡಿ ಬಲವಂತವಾಗಿ ಕುಳ್ಳಿರಿಸಲಾಗಿದೆ. ಇದು ನಿಮಗೆ ಶೋಭೆ ತರುವುದಿಲ್ಲ. ರೈತಾಪಿ ವರ್ಗ, ದೀನ ದಲಿತರು, ಅಲ್ಪಸಂಖ್ಯಾತರು, ಬಡವರು, ಶೋಷಿತರಿಗಾಗಿ ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಅವರು ಧರ್ಮರಾಯ, ಕೃಷ್ಣ, ಅರ್ಜುನನ ಪಾತ್ರ ಮಾಡುತ್ತಾರೆ. ಆದರೆ, ಕಾಂಗ್ರೆಸ್ ನಾಯಕರಂತೆ ಶಕುನಿ, ದುರ್ಯೋಧನನ ಪಾತ್ರಗಳನ್ನು ಮಾಡುವುದಿಲ್ಲ. ಪುಟ್ಟರಾಜು ವಿರುದ್ಧ ಸಮರ್ಥ ಕಾಂಗ್ರೆಸ್ ನಾಯಕನನ್ನು ಕಣಕ್ಕಿಳಿಸಿ ಗೆದ್ದು ತೋರಿಸಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್‌ಗೆ ಸವಾಲು ಹಾಕಿದರು.
ಪಂಚರತ್ನ ರಥಯಾತ್ರೆಗೆ ಚಾಲನೆ: ಚನ್ನಪಟ್ಟಣ ತಾಲೂಕಿನಿಂದ ಮಳವಳ್ಳಿಯ ಹಲಗೂರು ಮೂಲಕ ಪಂಚರತ್ನ ರಥಯಾತ್ರೆ ಆಗಮಿಸಿದೆ. ಡಿ.21ರಂದು ಮಳವಳ್ಳಿಯಿಂದ ಕೆ.ಎಂ.ದೊಡ್ಡಿ ಮೂಲಕ ಮದ್ದೂರಿಗೆ ಆಗಮಿಸಿ ತಾಲೂಕಿನಾದ್ಯಂತ ಸಂಚರಿಸುತ್ತದೆ. ಡಿ.22ರಂದು ಹನಕೆರೆ ಮೂಲಕ ಮಂಡ್ಯ ತಾಲೂಕಿಗೆ ಆಗಮಿಸುವ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಗುವುದು ಎಂದು ಹೇಳಿದರು.
ಅಂದು ಸಕ್ಕರೆ ವೃತ್ತದ ಮೂಲಕ ಮಂಡ್ಯ ನಗರವನ್ನು ಪ್ರವೇಶಿಸಿ ವಿವಿಧ ಬಡಾವಣೆ ಮೂಲಕ ನಗರ ಸಿಲ್ವರ್ ಜ್ಯುಬಿಲಿ ಪಾರ್ಕಿಗೆ ಆಗಮಿಸಿ ಬಹಿರಂಗ ಸಭೆಯನ್ನುದ್ದೇಶಿಸಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಲಿದ್ದಾರೆ. ಬಳಿಕ ಕಾರೆಮನೆ ಗೇಟ್ ಮಾರ್ಗವಾಗಿ ಸಾತನೂರಿಗೆ ತೆರಳಿ ಮಧ್ಯಾಹ್ನ ಕಾರ್ಯಕರ್ತರೊಂದಿಗೆ ಭೋಜನ ಸ್ವೀಕರಿಸಲಿದ್ದಾರೆ. ಜಿಲ್ಲಾದ್ಯಂತ ಸಂಚರಿಸಲಿರುವ ಪಂಚರತ್ನ ರಥಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ವೆಂಕಟೇಶ್, ಶಶಿಕುಮಾರ್, ರಾಮಕೃಷ್ಣ, ಗೌತಮ್ ಇತರರಿದ್ದರು.