ಜಿಲ್ಲೆ

ಟೀಕೆಗೆ ತಲೆಕೆಡಿಸಿಕೊಳ್ಳದೆ ಸೇವೆ ಮುಂದುವರಿಕೆ: ಜೆಡಿಎಸ್ ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ಹೇಳಿಕೆ

ಮಂಡ್ಯ: ಸಾರ್ವಜನಿಕರಿಗೆ ಅನುಕೂಲ ಮಾಡುವ ಉದ್ದೇಶದಿಂದ ರಸ್ತೆ ಗುಂಡಿಗಳನ್ನು ಮುಚ್ಚುವ ಅಭಿಯಾನ ಮಾಡುತ್ತಿದ್ದೇನೆ. ಇದರ ಬಗ್ಗೆ ಕೆಲವರು ಟೀಕೆ ಮಾಡಿದರೂ ತಲೆಕೆಡಿಸಿಕೊಳ್ಳದೆ ಸೇವೆ ಮುಂದುವರಿಸುತ್ತೇನೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ಹೇಳಿದರು.

ಸೋಮವಾರ ನಗರದ ನಂದಾ ಟಾಕೀಸ್ ಬಳಿಯ ತಿರುವಿನ ರಸ್ತೆಯಲ್ಲಿ ಗುಂಡಿಯನ್ನು ಮುಚ್ಚುವ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.

ರಸ್ತೆ ಗುಂಡಿ ಮುಚ್ಚುವ ಮೂಲಕ ಗಿಮಿಕ್ ಮಾಡುತ್ತಿದ್ದಾರೆ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ. ರಸ್ತೆ ಗುಂಡಿಯಿಂದ ಸಂಭವಿಸಿದ ಅಪಘಾತದಲ್ಲಿ ನಿವೃತ್ತ ಸೈನಿಕ ಕುಮಾರ್ ಸಾವಿನಿಂದ ಆ ಕುಟುಂಬಕ್ಕೆ ಆಗಿರುವ ನೋವನ್ನು ಕಣ್ಣಾರೆ ನೋಡಿದ್ದೇನೆ. ಈ ಹಿನ್ನೆಲೆಯಲ್ಲಿ ಮಾನವೀಯ ದೃಷ್ಟಿಯಿಂದ ರಸ್ತೆ ಗುಂಡಿ ಮುಚ್ಚಿ ಜನರ ಪ್ರಾಣ ಉಳಿಸಿ ಅಭಿಯಾನ ಮಾಡಲಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟವರು ಕೂಡಲೇ ರಸ್ತೆ ದುರಸ್ತಿ ಮಾಡಿಸಲಿ ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ನಂದಾ ಟಾಕೀಸ್ ಮುಂಭಾಗದ ಆಟೋ ನಿಲ್ದಾಣದ ಚರಂಡಿಯಲ್ಲಿ ಸಂಗ್ರಹವಾಗುವ ಕೊಳಚೆ ನೀರಿನಿಂದ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಆದ್ದರಿಂದ ಚರಂಡಿ ದುರಸ್ತಿಗೊಳಿಸುವಂತೆ ಜನರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮಹಾಲಿಂಗೇಗೌಡ, ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಅಭಿಯಾನದ ಅಂಗವಾಗಿ ಆನೆ ಪಾರ್ಕ್, ಅಶೋಕನಗರ, ಕಲ್ಲಹಳ್ಳಿ ಸೇರಿದಂತೆ ಕೆಲವೆಡೆ ಗುಂಡಿ ಮುಚ್ಚಲಾಯಿತು. ಮೋಹನ್‌ಗೌಡ ಮುದಿಗೌಡನಕೊಪ್ಪಲು, ವಿ.ಟಿ ವೆಂಕಟೇಶ್, ಶ್ರೀನಿವಾಸ್, ವಿಶ್ವನಾಥ್ ಇತರರಿದ್ದರು.