ವಿಜಯವಾಣಿ ಸುದ್ದಿಜಾಲ ದೊಡ್ಡಬೆಳವಂಗಲ
ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ಬೆಳೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ ಬರ ಪರಿಹಾರ ಹಣ ಬಿಡುಗಡೆಗೆ ವಿಳಂಬ ಮಾಡುತ್ತಿದೆ. ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಜೆಡಿಎಸ್ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆಯಲಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ಹೇಳಿದರು.
ದೊಡ್ಡಬೆಳವಂಗಲ ಹೋಬಳಿಯ ಕಾರೇಪುರದ ರೈತರ ಹೊಲಗಳಿಗೆ ಜೆಡಿಎಸ್ ಮುಖಂಡರ ತಂಡ ಭೇಟಿ ನೀಡಿ, ಮಳೆ-ಬೆಳೆ ಕುರಿತು ಮಾಹಿತಿ ಸಂಗ್ರಹಿಸಿ, ಮಾತನಾಡಿದರು. ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ರೈತರಿಗೆ ಸಮರ್ಪಕ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಕೃಷಿಗೆ 7 ಗಂಟೆಗಳ ಕಾಲದ ತ್ರೀ ಫೇಸ್ ವಿದ್ಯುತ್ ಸರಬರಾಜು ಮಾಡುವ ಸರ್ಕಾರದ ಭರವಸೆ ವಾಸ್ತವದಲ್ಲಿ ಜಾರಿಯಾಗಿಲ್ಲ. ಇದರಿಂದ ರೈತರು ತೀವ್ರ ಸಂಕಷ್ಟ ಪಡುವಂತಾಗಿದೆ ಎಂದು ತಿಳಿಸಿದರು.
ವಿಧಾನಪರಿಷತ್ ಮಾಹಿ ಇ.ಕೃಷ್ಣಪ್ಪ ಮಾತನಾಡಿ, ರೈತರು ಸಂಕಷ್ಟದಲ್ಲಿದ್ದರೂ ರಾಜ್ಯ ಸರ್ಕಾರದ ಸಚಿವರು ಗಮನ ಹರಿಸದೆ ಮೋಜು ಮಾಡುತ್ತಿದ್ದಾರೆ. ಸರ್ಕಾರ ಹೀಗೆ ನಿರ್ಲಕ್ಷ್ಯ ವಹಿಸಿದರೆ, ಹೋರಾಟ ನಡೆಸಿ, ಬಿಸಿ ಮುಟ್ಟಿಸಲಾಗುವುದು ಎಂದರು.
ಯುವ ಜೆಡಿಎಸ್ ಘಕದ ಅಧ್ಯಕ್ಷ ಸುನಿಲ್ ಕುಮಾರ್, ಅಧ್ಯಕ್ಷ ಸತೀಶ್ ಕುಮಾರ್, ಮಧುರೆ ಹೋಬಳಿ ಅಧ್ಯಕ್ಷ ರಂಗಸ್ವಾಮಿ ಇದ್ದರು.