ಜಿಲ್ಲೆ

ಭವನ ಪೂರ್ಣಗೊಳಿಸುವ ಇಚ್ಚಾಸಕ್ತಿ ತೋರಿಸಲಿ: ಜೆಡಿಎಸ್ ಎಸ್ಸಿ, ಎಸ್ಟಿ ಘಟಕದ ತಾಲೂಕು ಅಧ್ಯಕ್ಷ ಕಾಂತರಾಜು ಟೀಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರು ಎರಡು ಬಾರಿ ಶಾಸಕರಾಗಿದ್ದ ಅವಧಿಯಲ್ಲಿ ಅಂದಾಜು ನಾಲ್ಕು ಸಾವಿರ ಕೋಟಿ ರೂ.ಗೂ ಹೆಚ್ಚಿನ ಅನುದಾನದಲ್ಲಿ ಮಳವಳ್ಳಿ ಕ್ಷೇತ್ರದ ಅಭಿವೃದ್ದಿ ಮಾಡಿದ್ದಾರೆ. ಆದ್ದರಿಂದ ಅಭಿವೃದ್ದಿಯನ್ನೇ ಮಾಡಿಲ್ಲ ಎನ್ನುವ ಕಾಂಗ್ರೆಸ್ ಮುಖಂಡರ ಆರೋಪ ಸತ್ಯಕ್ಕೆ ದೂರ ಎಂದು ಜೆಡಿಎಸ್ ಎಸ್ಸಿ, ಎಸ್ಟಿ ಘಟಕದ ತಾಲೂಕು ಅಧ್ಯಕ್ಷ ಕಾಂತರಾಜು ತಿರುಗೇಟು ನೀಡಿದರು.

ಶಾಸಕ ನರೇಂದ್ರಸ್ವಾಮಿ ಅವರು ತಾವೊಬ್ಬರೇ ಅಭಿವೃದ್ದಿಯ ಹರಿಕಾರರೆಂದು ಹೇಳಿಕೊಳ್ಳುತ್ತಾರೆ. ಆದರೆ ಪ್ರತಿ ಶಾಸಕರು ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುವ ಇಚ್ಚಾಶಕ್ತಿ ಹೊಂದಿರುತ್ತಾರೆ. ಇದನ್ನು ನರೇಂದ್ರಸ್ವಾಮಿ ಅರಿಯಬೇಕು. ಮಳವಳ್ಳಿ ಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ, ಕನಕ ಭವನ, ಬಸವ ಭವನ ಹಾಗೂ ಬಾಬು ಜಗಜೀವನ ರಾಂ ಭವನಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಈ ವಿಚಾರದಲ್ಲಿ ನರೇಂದ್ರಸ್ವಾಮಿ ಇಚ್ಚಾಶಕ್ತಿ ಮೆರೆದು ಅಪೂರ್ಣಗೊಂಡಿರುವ ಭವನಗಳನ್ನು ಪೂರ್ಣಗೊಳಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ನರೇಂದ್ರಸ್ವಾಮಿ ಅವರು ಎಸ್ಸಿ, ಎಸ್ಟಿ ಸದನ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಮೈಸೂರು ತಾಲೂಕು ವಾಜಮಂಗಲದಲ್ಲಿ ಅಂಬೇಡ್ಕರ್ ಫಲಕಕ್ಕೆ ಅವಮಾನವೆಸಗಿರುವ ದುಷ್ಕರ್ಮಿಗಳ ಬಗ್ಗೆ ಚಕಾರವೆತ್ತದೇ ಮೌನವಾಗಿರುವ ಗುಟ್ಟೇನು?. ಪುರಸಭೆಯ ಮಾಜಿ ಅಧ್ಯಕ್ಷ ದೊಡ್ಡಯ್ಯ ಅವರ ಪತ್ನಿ ಹಾಲಿ ಜೆಡಿಎಸ್ ಪಕ್ಷದ ಪುರಸಭಾ ಸದಸ್ಯರಾಗಿದ್ದಾರೆ. ಕಾಂಗ್ರೆಸ್ ಪಡೆಸಾಲೆಯಲ್ಲಿರುವ ದೊಡ್ಡಯ್ಯ ಅವರಿಗೆ ನೈತಿಕತೆ ಇದ್ದರೆ ತಮ್ಮ ಪತ್ನಿಯಿಂದ ಪುರಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ ಎಂದು ಸವಾಲು ಹಾಕಿದರು.

ಜೆಡಿಎಸ್ ಯುವ ಘಟಕದ ಆಧ್ಯಕ್ಷ ಶ್ರೀಧರ್ ಮಾತನಾಡಿ, ಅಕ್ರಮ ಭೂ ಹಗರಣದ ಬಗ್ಗೆ ಕಾಂಗ್ರೆಸ್ ಮುಖಂಡರು ನಾಲಗೆ ನಿಯಂತ್ರಣವಿಲ್ಲದಂತೆ ಮಾತನಾಡುತ್ತಾರೆ. ಅವರ ಅವಧಿಯಲ್ಲೂ 300 ಎಕರೆಗಿಂತ ಹೆಚ್ಚು ಜಮೀನು ಕಬಳಿಕೆ ಆಗಿದ್ದು, ಸಮಗ್ರ ತನಿಖೆಯಾಗಿ ಅಕ್ರಮ ಮಂಜೂರಾತಿ ರದ್ದುಗೊಳಿಸಿ ಜಮೀನು ಸರ್ಕಾರದ ವಶಕ್ಕೆ ಪಡೆಯಲು ಕ್ರಮ ವಹಿಸಬೇಕು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಚಿಕ್ಕಲಿಂಗಯ್ಯ ಸ್ವಾರ್ಥಿ. ಅವರಿಂದ ಕುರುಬ ಸಮಾಜಕ್ಕೆ ನಯಾ ಪೈಸೆ ಪ್ರಯೋಜನವಾಗಿಲ್ಲ. ಸಮಾಜಕ್ಕೆ ಅವರ ಕೊಡುಗೆ ಏನೆಂದು ಪ್ರಶ್ನಿಸಿದರು.

ಜಿ.ಪಂ ಮಾಜಿ ಸದಸ್ಯ ಹನುಮಂತು ಮಾತನಾಡಿ, ಶಾಸಕ ನರೇಂದ್ರಸ್ವಾಮಿ ಅವರು ಎಲ್ಲರನ್ನು ಸಮಾನವಾಗಿ ಕಾಣಬೇಕು. ದೌರ್ಜನ್ಯದಿಂದ ಮಾತನಾಡುವುದನ್ನು ಬಿಟ್ಟು ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ದಿಗೆ ಶ್ರಮಿಸಲಿ ಎಂದು ಒತ್ತಾಯಿಸಿದರು.

ಜಿಲ್ಲಾ ಎಸ್ಸಿ,ಎಸ್ಟಿ ಘಟಕದ ಅಧ್ಯಕ್ಷ ಸಾತನೂರು ಜಯರಾಂ, ಮುಖಂಡರಾದ ಸಿದ್ದಾಚಾರಿ, ಸದಾನಂದ, ಕುಂತೂರು ಸೋಮಣ್ಣ ಇದ್ದರು.