ಜಿಲ್ಲೆ

ಮಂಡ್ಯ ತಾಲೂಕಿನಲ್ಲಿ ಗುಂಡಿ ಮುಚ್ಚುವ ಅಭಿಯಾನ: ಜಿಲ್ಲಾ ಜೆಡಿಎಸ್ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ಮಾಹಿತಿ

reportermys

ಮಂಡ್ಯ: ರಾಜ್ಯಾದ್ಯಂತ ಗುಂಡಿ ಬಿದ್ದ ರಸ್ತೆಗಳಿಂದ ಅನಾಹುತ ಸಂಭವಿಸುತ್ತಲೇ ಇದ್ದರೂ ದಪ್ಪ ಚರ್ಮದ ರಾಜ್ಯ ಸರ್ಕಾರ ಮಾತ್ರ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿಲ್ಲ. ಇತ್ತ ಅಧಿಕಾರಿಗಳ ನಿರ್ಲಕ್ಷೃತನವೂ ಮುಂದುವರಿಯುತ್ತಿರುವುದರಿಂದ ಜನರು ಅಪಾಯ ತಂದುಕೊಳ್ಳುವಂತಾಗಿದೆ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ಟೀಕಿಸಿದರು.

ನಗರದಲ್ಲಿ ನ.13ರಂದು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ನಿವೃತ್ತ ಸೈನಿಕ ಕುಮಾರ್ ಅವರ ಸಾತನೂರು ನಿವಾಸಕ್ಕೆ ಮಂಗಳವಾರ ಭೇಟಿ ಕೊಟ್ಟು ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಸರ್ಕಾರಕ್ಕೆ ಎಷ್ಟು ಮನವಿ ಮಾಡಿಕೊಂಡರೂ ಪ್ರಯೋಜನವಿಲ್ಲ. ಆದ್ದರಿಂದ ನಮ್ಮ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳಬೇಕಾದ ಸ್ಥಿತಿ ಬಂದಿದೆ. ಈ ನಿಟ್ಟಿನಲ್ಲಿ ಮಂಡ್ಯ ನಗರ ಸೇರಿದಂತೆ ತಾಲೂಕಿನಾದ್ಯಂತ ನನ್ನ ವೈಯಕ್ತಿಕ ಖರ್ಚಿನಲ್ಲಿ ಗುಂಡಿ ಮುಚ್ಚುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ವೇಳೆ ಮಂಡ್ಯ ನಗರದ ಅಭಿವೃದ್ಧಿಗೆಂದು 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಆದರೆ, ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಅನುದಾನ ವಾಪಸ್ ಪಡೆದುಕೊಂಡಿತ್ತು. ಪರಿಣಾಮ ರಸ್ತೆಗಳ ಅಭಿವೃದ್ಧಿಯೂ ನಿಂತು ಹೋಗುವಂತಾಯಿತು. ನಿವೃತ್ತ ಸೈನಿಕ ಕುಮಾರ್ ಸರ್ಕಾರದ ಕೆಟ್ಟ ವ್ಯವಸ್ಥೆ, ಅಧಿಕಾರಿಗಳ ನಿರ್ಲಕ್ಷೃದ ಕಾರ್ಯವೈಖರಿಗೆ ಬಲಿಯಾದದ್ದು, ನೋವಿನ ವಿಚಾರ. ರಸ್ತೆಯಲ್ಲಿರುವ ಅದೆಷ್ಟೋ ಗುಂಡಿಗಳು ಜನರ ಬಲಿ ಪಡೆಯಲು ಕಾದುನಿಂತಿವೆ. ಆದ್ದರಿಂದ ಸರ್ಕಾರ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಈಗಲಾದರೂ ರಸ್ತೆ ದುರಸ್ತಿಗೆ ಕ್ರಮ ವಹಿಸಲಿ ಎಂದು ಆಗ್ರಹಿಸಿದರು.

ಮುಖಂಡರಾದ ವೆಂಕಟೇಶ್, ಶಶಿಕುಮಾರ್, ಚಂದ್ರು, ನಿವೃತ್ತ ಸೈನಿಕ ಕುಮಾರ್ ಅವರ ತಂದೆ ನರಸಯ್ಯ, ತಾಯಿ ಸರೋಜಮ್ಮ ಇದ್ದರು. ಈ ಸಂದರ್ಭದಲ್ಲಿ ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕುಟುಂಬಕ್ಕೆ ಮಹಾಲಿಂಗೇಗೌಡ ಮುದ್ದನಘಟ್ಟ ಅವರು ಆರ್ಥಿಕ ನೆರವು ನೀಡಿದರು.