ಜಿಲ್ಲೆ

ಜೆಡಿಎಸ್ ಸೇರ್ಪಡೆ ಹೇಳಿಕೆ ಸತ್ಯಕ್ಕೆ ದೂರ

ಜಿ.ಹೆಚ್. ಧನ್ಯಕುಮಾರ್

ಕಡೂರು: ತಾಲೂಕಿನ ಹೋಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಂಗ್ರೆಸ್ ಸಧೃಡವಾಗಿದೆ ಎಂದು ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಹೇಳಿದರು.

ಮರವಂಜಿ ಗ್ರಾಮದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮರವಂಜಿ, ಹೋಚಿಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡರು ಜೆಡಿಎಸ್ ಸೇರ್ಪಡೆಗೊಂಡಿರುವ ಬಗ್ಗೆ ಹೇಳಿಕೆಗಳು ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟನೆ ನೀಡಿದರು.

ಹೋಚಿಹಳ್ಳಿ ಮರವಂಜಿಯ ಗ್ರಾಪಂ ಸದಸ್ಯರು ಒಗ್ಗಟಿನಿಂದ ಇದ್ದಾರೆ. ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಈ ಎರಡು ಗ್ರಾಮಗಳು ಹೆಚ್ಚಿನ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿ ಶಕ್ತಿ ತುಂಬಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಗ್ರಾಮಸ್ಥರು, ಬಡವರಿಗೆ ಹೆಚ್ಚಿನ ಅನುಕೂಲವಾಗಿದೆ ಇಂತಹ ಸಂಧರ್ಭದಲ್ಲಿ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಯಾಗಿದ್ದಾರೆ ವದಂತಿಗಳು ಸುಳ್ಳಾಗಿದೆ. ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಓರ್ವ ಕಾಂಗ್ರೆಸ್ ಸದಸ್ಯ ಅಧ್ಯಕ್ಷ ಸ್ಥಾನದ ಆಸೆೆಗಾಗಿ ಜೆಡಿಎಸ್ ಗೆ ಬೆಂಬಲ ನೀಡಿದ್ದಾರೆ ಹೊರತು ಯಾರೊಬ್ಬರು ಕಾಂಗ್ರೆಸ್ ತೊರೆದಿಲ್ಲ ಎಂದರು.

ತಾಪಂ ಮಾಜಿ ಅಧ್ಯಕ್ಷ ಹೆಚ್.ಆರ್. ಭೋಗಪ್ಪ ಮಾತನಾಡಿ, ಇಲ್ಲಿನ ಮೂಲ ಕಾಂಗ್ರೆಸ್‌ನವರು ಇತರೆ ಪಕ್ಷಕ್ಕೆ ಪಕ್ಷಾಂತರ ಮಾಡಿಲ್ಲ . ಮರವಂಜಿ ಗ್ರಾಮಕ್ಕೆ ಸಮುದಾಯ ಭವನ, ಸಿಸಿ ರಸ್ತೆಗಳನ್ನು ಕಾಂಗ್ರೆಸ್ ಶಾಸಕ ಕೆ.ಎಸ್.ಆನಂದ್ ಅನುದಾನದಲ್ಲಿ ನಡೆಯುತ್ತಿವೆ. ಗ್ರಾಮದ ಮೂಲಭೂತ ಸಮಸ್ಯೆ ಪರಿಹಾರಕ್ಕೆ ಪಕ್ಷ ಸ್ಪಂದಿಸಿದೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ರಂಗಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಸಕ ಕೆ.ಎಸ್.ಆನಂದ್ ಅವರನ್ನು ಒಪ್ಪಿ ಮತ ನೀಡಿದ್ದಾರೆ. ಇಲ್ಲಿನ ಜನಕ್ಕೆ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗಲು ಇಷ್ಟವಿಲ್ಲ ಎಂಬುದನ್ನು ಇತರೆ ಪಕ್ಷದವರು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಮದ ಮುಖಂಡ ನರಸಿಂಹಪ್ಪ, ಉಪ್ಪಾರ ಮುಖಂಡ ಸತೀಶ್, ಲಿಂಗಾಯತ ಮುಖಂಡ ಓಂಕಾರಪ್ಪ, ಹೋಚಿಹಳ್ಳಿ ಗ್ರಾಪಂ ಅಧ್ಯಕ್ಷೆ ರಾಧ ಮಂಜುನಾಥ್, ಉಪಾಧ್ಯಕ್ಷ ಎಚ್.ಟಿ. ಮಲ್ಲೇಶಪ್ಪ, ಸದಸ್ಯರಾದ ಎಂ.ಕೆ.ರಂಗಪ್ಪ, ನಂಜುಂಡಪ್ಪ, ಶರಾವತಿ ಲಿಂಗರಾಜ್ ಗ್ರಾಮದ ಮುಖಂಡರಾದ ಮಂಜಣ್ಣ, ಕಲ್ಲೇಶಪ್ಪ, ರಾಜೇಶ್, ಹನುಮಂತಪ್ಪ, ಚಿಕ್ಕಣ್ಣ, ಶಿವಣ್ಣ, ಟಿ.ವೆಂಕಟೇಶ್, ರಾಜಪ್ಪ, ರಂಗಪ್ಪ ಮತ್ತಿತರಿದ್ದರು.