ಮದ್ದೂರು ಸಮೀಪದ ಗೆಜ್ಜಲಗೆರೆಯಲ್ಲಿ ಆಯೋಜಿಸಿದ್ದ ಜೆಡಿಎಸ್, ಬಿಜೆಪಿ ಮೈತ್ರಿ ಪಕ್ಷಗಳ ಪೂರ್ವಭಾವಿ ಸಭೆಯಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿದರು. ಎಸ್.ಪಿ.ಸ್ವಾಮಿ, ಸುರೇಶ್‌ಗೌಡ, ಎಸ್.ಗುರುಚರಣ್, ಜಿ.ಬಿ.ಕೃಷ್ಣ, ವಿ.ಎಂ.ವಿಶ್ವನಾಥ್ ಇತರರು ಇದ್ದರು. 
ಜಿಲ್ಲೆ

ಜಿಲ್ಲೆಯಲ್ಲಿ ಬಲಿಷ್ಠವಾಗಿದೆ ಜೆಡಿಎಸ್

ಮದ್ದೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮನವಿ ಮಾಡಿದರು.

ಸಮೀಪದ ಗೆಜ್ಜಲಗೆರೆಯಲ್ಲಿ ಬುಧವಾರ ಆಯೋಜಿಸಿದ್ದ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕರ ಚುನಾವಣೆ ಪೂರ್ವಭಾವಿ ಸಭೆ (ಸಹಕಾರ ಪತ್ತಿನ ಕ್ಷೇತ್ರ) ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೈತರ ಪರವಾಗಿ ಹಾಗೂ ಹಿತಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವುದು ಜೆಡಿಎಸ್ ಮತ್ತು ಬಿಜೆಪಿ. ಇದನ್ನರಿತು ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಸಹಕಾರ ಕ್ಷೇತ್ರದ ಒಳಿತಿಗಾಗಿ ಸಹಕಾರ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಜೆಡಿಎಸ್ ಬಲಿಷ್ಠವಾಗಿದೆ ಹಾಗೂ ಜಿಲ್ಲೆಗೆ ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಹಾಗೂ ರೈತ ಹಾಗೂ ಜನಪರವಾದ ಕೆಲಸ ಮಾಡಿರುವುದು ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಮಾತನಾಡಿ, ನವಂಬರ್ 2ರಂದು ನಡೆಯಲಿರುವ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಮದ್ದೂರು ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಚುನಾವಣೆಗೆ ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಜಿ.ಬಿ ಕೃಷ್ಣ ಹಾಗೂ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಚುನಾವಣೆಯಲ್ಲಿ ನಿರ್ದೇಶಕರ ಸ್ಥಾನಕ್ಕೆ ಮಂಡ್ಯ ವಿಭಾಗದ (ಮಂಡ್ಯ, ಮದ್ದೂರು, ಮಳವಳ್ಳಿ) ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರಕ್ಕೆ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿ.ಎಂ.ವಿಶ್ವನಾಥ್ ಇಬ್ಬರನ್ನು ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲು ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕೆಂದು ಮನವಿ ಮಾಡಿದರು.

ಮಾಜಿ ಶಾಸಕ ಸುರೇಶ್‌ಗೌಡ, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್, ಮದ್ದೂರು ತಾಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಚುನಾವಣೆಗೆ ಎನ್‌ಡಿಎ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಜಿ.ಬಿ ಕೃಷ್ಣ , ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿ.ಎಂ.ವಿಶ್ವನಾಥ್, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಕೆ.ಸತೀಶ್, ಮುಖಂಡರಾದ ಕೂಳಗೆರೆ ಶೇಖರ್, ಬಿದರಕೋಟೆ ಕುಶ, ರವಿ ಚನ್ನಸಂದ್ರ ಇತರರು ಇದ್ದರು.