ಜಿಲ್ಲೆ

ಸದಸ್ಯತ್ವ ಅಭಿಯಾನದಿಂದ ಜೆಡಿಎಸ್ ಬಲಿಷ್ಠ

ವೀರೇಶ ಸೌದ್ರಿ

ಕುಮಟಾ: ಜೆಡಿಎಸ್ ಸಂಘಟನೆ ಹಾಗೂ ಬಲವರ್ಧನೆ ದೃಷ್ಟಿಯಿಂದ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ಆರಂಭಗೊಂಡಿದೆ. ಕುಮಟಾ-ಹೊನ್ನಾವರ ವಿಧಾನಸಭೆ ಕ್ಷೇತ್ರದ ಎಲ್ಲ 215 ಬೂತ್‌ಗಳಲ್ಲಿ ಅಭಿಯಾನ ಮುನ್ನಡೆಸಲಾಗುವುದು ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸೂರಜ ನಾಯ್ಕ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ 29 ಪಂಚಾಯಿತಿಯ ಬೂತ್‌ಗಳಲ್ಲಿ 15 ರಿಂದ 20 ಮಂದಿಯನ್ನು ಅಭಿಯಾನಕ್ಕೆ ಸಜ್ಜುಗೊಳಿಸಲಾಗಿದೆ. ಅಭಿಯಾನದ ಯಶಸ್ಸಿನ ಜತೆಯಲ್ಲೇ ಮುಂಬರುವ ಅಕ್ಟೋಬರ್-ನವೆಂಬರ್‌ನಲ್ಲಿ ಬೃಹತ್ ಸಮಾವೇಶ ನಡೆಸಲಿದ್ದು, ಪಕ್ಷದ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಇತರ ವರಿಷ್ಠರು ಆಗಮಿಸಲಿದ್ದಾರೆ. ಅಭಿಯಾನದ ಜಿಲ್ಲೆಯ ಉಸ್ತುವಾರಿಗಳಾಗಿ ವೈಎಸ್‌ವಿ ದತ್ತಾ, ಗುರುರಾಜ ಹುಣಸಿಮರದ ಕಾರ್ಯನಿರ್ವಹಿಸುತ್ತಿದ್ದು ಕಳೆದ ಚುನಾವಣೆಯಲ್ಲಿ ನಾವು ಗಳಿಸಿದ ಗೆಲುವಿಗೆ ತೀರಾ ಅಂಚಿನಲ್ಲಿದ್ದ ಮತ ಸಂಖ್ಯೆಯನ್ನು ಮೀರಿ ಹೆಚ್ಚಿನ ಸದಸ್ಯರನ್ನು ನೋಂದಾಯಿಸುವತ್ತ ಗುರಿ ಹಾಕಿಕೊಂಡಿದ್ದೇವೆ ಎಂದರು.

ಕುಮಟಾ ಹಾಗೂ ಹೊನ್ನಾವರದಲ್ಲಿ ಅಗ್ನಿಶಾಮಕ ಠಾಣೆಯಲ್ಲಿ ಸಿಬ್ಬಂದಿ ಇದ್ದರೂ ಸುಸಜ್ಜಿತ ವಾಹನ ಇಲ್ಲದಂತಾಗಿದೆ. ಇಷ್ಟೊಂದು ಜನಸಂಖ್ಯೆ ಇರುವ ವಿಶಾಲ ಪ್ರದೇಶಕ್ಕೆ ಅಗ್ನಿಶಾಮಕ ವ್ಯವಸ್ಥೆ ತೀರಾ ದುರ್ಬಲ ಸ್ಥಿತಿಯಲ್ಲಿರುವುದು ಕಳವಳಕಾರಿ. ಕೂಡಲೆ ಅಗ್ನಿಶಾಮಕ ವಾಹನವನ್ನು ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.

ತಾಲೂಕಾಧ್ಯಕ್ಷ ಸಿ.ಜಿ.ಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾ ಪಟಗಾರ, ಮಹೇಂದ್ರ ನಾಯ್ಕ, ಮಹಾಬಲೇಶ್ವರ ಗೋಕರ್ಣ, ಗೋವಿಂದರಾಯ ಶಾನಭಾಗ, ಬಲೀಂದ್ರ ಗೌಡ, ಸತೀಷ ಮಹಾಲೆ, ರಾಘವೇಂದ್ರ ನಾಯ್ಕ, ಶಶಿಧರ ಹಾಡುಗೋಳಿ, ವಸಂತ ಗೌಡ, ಅಣ್ಣಪ್ಪ ನಾಯ್ಕ ಇನ್ನಿತರರು ಇದ್ದರು.